ಗಿರಿಜನ ಆರೋಗ್ಯ ಘಟಕಕ್ಕೆ ವಾಹನವಿಲ್ಲ

Btw_Kundu-korathe
Published on

ಬಂಟ್ವಾಳ: ತಾಲೂಕಿನ ಅಡ್ಯನಡ್ಕ ಸಂಚಾರಿ ಗಿರಿಜನ ಆರೋಗ್ಯ ಘಟಕದಲ್ಲಿದ್ದ ಹಳೇ ವಾಹನವನ್ನು ನಿಯಮದಂತೆ ಗುಜರಿಗೆ ಹಾಕಲಾಗಿದೆ. ಇದರಿಂದಾಗಿ ವಾಹನವಿಲ್ಲದೆ ಗುಡ್ಡಗಾಡು ಪ್ರದೇಶಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲನಿಗಳಿಗೆ ವೈದ್ಯರು ಹೋಗಲು ಹಾಗೂ ಔಷಧ ಪೂರೈಸಲು ಸಾಧ್ಯವಾಗುತ್ತಿಲ್ಲ. ಈವರೆಗೆ ಹೊಸ ವಾಹನ ಯಾಕೆ ನೀಡಿಲ್ಲ? ಎಂದು ಸದಸ್ಯರು ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು.

ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ಸಭೆಯಲ್ಲಿ ವಿಚಾರ ಪ್ರಸ್ತಾಪವಾಯಿತು.

ಆರೋಗ್ಯಾಧಿಕಾರಿ ಅಶೋಕ್ ರೈ ಪ್ರತಿಕ್ರಿಯಿಸಿ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸ ವಾಹನ ಇಲಾಖೆಗೆ ಬಂದಿಲ್ಲ ಎಂದು ತಿಳಿಸಿದರು.

ಅತಿಥಿ ಶಿಕ್ಷಕರ ನೇಮಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆದ್ಯತೆ ನೀಡಬೇಕು. ಅನೇಕ ಬಡ ವಿದ್ಯಾವಂತರು ಇದ್ದರೂ ಕೂಡ ಅತಿಥಿ ಶಿಕ್ಷಕರ ನೇಮಕದಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಇದರಿಂದಾಗಿ ವಿದ್ಯಾವಂತರು ಕೆಲಸ ಸಿಗದೆ ಮನೆಯಲ್ಲಿಯೇ ಉಳಿಯುವಂತಾಗಿದೆ ಎಂದು ಹೊನ್ನಪ್ಪ ಕುಂದರ್ ಆರೋಪಿಸಿದರು. ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ಪ್ರತ್ರಿಕ್ರಿಯಿಸಿ, ಅತಿಥಿ ಶಿಕ್ಷಕರ ನೇಮಕಾತಿ ಎಸ್‌ಡಿಎಂಸಿ ಮೂಲಕ ನಡೆಯುತ್ತದೆ ಎಂದು ತಿಳಿಸಿದರು.

ಮಂಚಿ ಗ್ರಾಮದ ಕಚೆ ಎಂಬಲ್ಲಿ ಕಿರಿಯ ಪ್ರಾಥಮಿಕ ಶಾಲೆಗೆ ಸಂಪರ್ಕಿಸುವ ರಸ್ತೆ ಕಿರಿದಾಗಿದೆ. ಇಲ್ಲಿ ಹೈಮಾಸ್ಟ್ ದೀಪ ಅಳವಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಲ್ಲಿ ರಾತ್ರಿ 12 ಗಂಟೆಯವರೆಗೂ ಗಾಂಜಾ ವ್ಯಸನಿಗಳು ತಿರುಗಾಡುತ್ತಿದ್ದು ಭಯದ ವಾತವರಣವಿದೆ. ಆದ್ದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದು ಸದಸ್ಯರೊಬ್ಬರು ಅಳಲು ತೋಡಿಕೊಂಡರು.

ಸಿಸಿ ಟಿವಿ ಅಳವಡಿಕೆ: ಸಜೀಪಮುನ್ನೂರು ಗ್ರಾಮದಲ್ಲಿ ರಸ್ತೆ ಬದಿ ಕಸ ಬಿಸಾಡುತ್ತಿದ್ದಾರೆ ಎಂಬ ದೂರಿಗೆ ಪಿಡಿಒ ಲಕ್ಷ್ಮಣ್ ಪ್ರತಿಕ್ರಿಯಿಸಿ, ಎಚ್ಚರಿಕೆಯ ಫಲಕ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದರು. ಕಸ ಎಸೆಯುವವರ ವಿರುದ್ಧ ಎಫ್‌ಐಆರ್ ಹಾಕಿ ಎಂದು ತಹಸೀಲ್ದಾರ್ ತಿಳಿಸಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆಯಬೇಕು. ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಹಾಜರಿರಬೇಕು ಎಂದು ಹಿಂದಿನ ಸಭೆಯಲ್ಲಿ ತಿಳಿಸಿದರೂ, ಸ್ಪಂದಿಸದ ಅಧಿಕಾರಿಗಳ ವಿರುದ್ಧ ಗಂಗಾಧರ ಪರಾರಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಯೋಜನೆಗಳು ದಳ್ಳಾಳಿಗಳ ಮೂಲಕ ಅನರ್ಹರಿಗೆ ತಲುಪುತ್ತಿದೆ. ಮೊದಲೇ ಅರ್ಜಿ ಹಾಕಿ ಅನೇಕ ವರ್ಷಗಳಿಂದ ಕಾಯುತ್ತಿರುವ ಅರ್ಹ ಫಲಾನುಭವಿಗಳು ಇದರಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಮೊದಲು ಅರ್ಜಿ ಸಲ್ಲಿಸಿದ ಅರ್ಹರಿಗೆ ಆದ್ಯತೆಯ ನೆಲೆಯಲ್ಲಿ ಸರ್ಕಾರಿ ಸೌಲಭ್ಯಗಳು ತಲುಪಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಯಶ್ರೀ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಮನೀಶ್, ಬಂಟ್ವಾಳ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮ ಬೇಡ

ಸರ್ಕಾರಿ ಶಾಲೆಗಳ ಮೈದಾನದಲ್ಲಿ ಯಕ್ಷಗಾನ ಮತ್ತಿತರ ಖಾಸಗಿ ಕಾರ್ಯಕ್ರಮ ಆಯೋಜಿಸಿ ಪಟಾಕಿ, ಸುಡುಮದ್ದು ಬಿಟ್ಟು ಅವುಗಳನ್ನು ಮಕ್ಕಳಿಂದ ಸ್ವಚ್ಛಗೊಳಿಸಲಾಗುತ್ತಿದೆ. ಸರ್ಕಾರಿ ಶಾಲೆಗಳ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮ ನಡೆಸುವುದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇತ್ತೀಚೆಗೆ ಶಾಲೆಯೊಂದರ ಮೈದಾನದಲ್ಲಿ ಬೈಕ್ ರೇಸ್ ಕೂಡ ನಡೆದಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಕಾರ್ಯಕ್ರಮಗಳಿಗೆ ಯಾಕೆ ಅನುಮತಿ ನೀಡುತ್ತಾರೆ? ಎಂದು ಹೊನ್ನಪ್ಪ ಕುಂದರ್ ಪ್ರಶ್ನಿಸಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಶುಚಿತ್ವ ಕೊರತೆ

ಬಿ.ಸಿ.ರೋಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಪಾತ್ರೆಗಳು ಹಸಿರು ಬಣ್ಣಕ್ಕೆ ತಿರುಗಿವೆ. ಕುಡಿಯುವ ನೀರು ಶುದ್ಧವಾಗಿಲ್ಲ. ಟ್ಯಾಂಕ್ ಸ್ವಚ್ಛಗೊಳಿಸುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು. ಪುರಸಭೆಯ ಆರೋಗ್ಯ ನಿರೀಕ್ಷಕರು ಹಾಗೂ ಸಮಾಜ ಕಲ್ಯಾಣಾಧಿಕಾರಿ ತೆರಳಿ ಈ ಬಗ್ಗೆ ಪರಿಶೀಲಿಸುವಂತೆ ತಹಸೀಲ್ದಾರ್ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net