ಕೃಷ್ಣಾ ಅಧಿಸೂಚನೆಗೆ ಕಾಲ ಸನ್ನಿಹಿತ: ಸಿಎಂ ಬೊಮ್ಮಾಯಿ ಆಶಾಭಾವನೆ; ಸುಪ್ರೀಂ ಕೋರ್ಟ್​ನಲ್ಲಿ ಜ.10ಕ್ಕೆ ವಿಚಾರಣೆ ನಿಗದಿ

Krishna
Published on

ಬೆಳಗಾವಿ: ಕೃಷ್ಣಾ ಎರಡನೇ ನ್ಯಾಯಾಧಿಕರಣ ನೀಡಿದ ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಿಸುವ ಕಾಲ ಸನ್ನಿಹಿತವಾಗಿದೆ ಎಂಬ ಆಶಾಭಾವನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಮೇಲೆ ಬುಧವಾರ ನಡೆದ ಚರ್ಚೆಗೆ ಸಿಎಂ ಉತ್ತರಿಸಿದರು. ಸುಪ್ರೀಂ ಕೋರ್ಟ್​ನಲ್ಲಿ ‘ಕೃಷ್ಣಾ’ ವ್ಯಾಜ್ಯದ ತ್ವರಿತ ವಿಚಾರಣೆ ನಡೆಯುತ್ತಿದ್ದು, ಮುಂದಿನ ವಿಚಾರಣೆ ಜ.10ಕ್ಕೆ ನಿಗದಿಪಡಿಸಿದೆ. ಅಧಿಸೂಚನೆ ಪ್ರಕಟಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಹಾರಾಷ್ಟ್ರ ಮತ್ತು ಕರ್ನಾಟಕ ಸಲ್ಲಿಸಿದ್ದ ಅರ್ಜಿ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಲ್ಲದೆ, ಕೇಂದ್ರದ ಜಲಶಕ್ತಿ ಸಚಿವರನ್ನು ಪದೇಪದೆ ಭೇಟಿ ಮಾಡಿ ಅಧಿಸೂಚನೆ ಅವಶ್ಯಕತೆಯನ್ನು ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಟ್ಟಿದ್ದು, ಸುಪ್ರೀಂ ಕೋರ್ಟ್​ನಲ್ಲಿ ತೆಲಂಗಾಣ ದಾಖಲಿಸಿದ್ದ ಮೇಲ್ಮನವಿ ಹಿಂಪಡೆದುಕೊಂಡಿದೆ. ಹೀಗಾಗಿ ಅಧಿಸೂಚನೆ ಪ್ರಕಟಿಸುವ ದಾರಿ ಸುಗಮವಾಗಿದ್ದು, ಸುಪ್ರೀಂ ಕೋರ್ಟ್​ನಲ್ಲಿ ಆದಷ್ಟು ಬೇಗ ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲಿದೆ. ವ್ಯಾಜ್ಯದ ವಿಚಾರಣೆ ದಿನಾಂಕ ನಿಗದಿಯಾದಾಗಲೆಲ್ಲ ರಾಜ್ಯದ ಕಾನೂನು ತಂಡದ ಜತೆಗೆ ರ್ಚಚಿಸುತ್ತಿದ್ದು, ನಿಕಟ ಸಂಪರ್ಕವಿಟ್ಟುಕೊಂಡಿರುವೆ ಎಂದು ಬೊಮ್ಮಾಯಿ ವಿವರಿಸಿದರು.

ಕಳಸಾ-ಬಂಡೂರಿ ವಿಸ್ತೃತ ಯೋಜನಾ ವರದಿ ಸಲ್ಲಿಕೆ: ಕಳಸಾ-ಬಂಡೂರಿ ಕುಡಿಯುವ ನೀರು ಪೂರೈಕೆ ಯೋಜನೆಗೆ 7.50 ಟಿಎಂಸಿ ಅಡಿ ನೀರಿನ ಅಗತ್ಯವಿದ್ದು, ಸದ್ಯಕ್ಕೆ 3.90 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಸುಪ್ರೀಂ ಕೋರ್ಟ್​ನಲ್ಲಿ ಈ ಸಂಬಂಧ ವ್ಯಾಜ್ಯವಿದ್ದರೂ ಕುಡಿಯುವ ನೀರಿನ ಅನುಷ್ಠಾನಕ್ಕೆ ಅಸ್ತು ಎಂದಿದೆ. ಆದರೆ 3.90 ಟಿಎಂಸಿ ಅಡಿ ಅಥವಾ 7.50 ಟಿಎಂಸಿ ಅಡಿ ಬಳಕೆಗೆ ಯೋಜನೆ ರೂಪಿಸಬೇಕೋ? ಬೇಡವೋ ಎಂಬ ಗೊಂದಲ ನಿವಾರಿಸಿಕೊಳ್ಳಲು ಕಾಲಾವಕಾಶ ಬೇಕಾಯಿತು. ಇದೀಗ ಕಳಸಾ-ಬಂಡೂರಿ ನಾಲಾ ಕುಡಿಯುವ ನೀರು ಪೂರೈಕೆಗೆ ಪರಿಷ್ಕೃತ ವಿಸõತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪರಿಸರ ಸಚಿವಾಲಯದ ತೀರುವಳಿ ಲಭಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಸಿಎಂ ತಿಳಿಸಿದರು.

ನೀರಾವರಿ ಯೋಜನೆ ಪೂರ್ಣಗೊಳಿಸಿ: ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಆದ್ಯತೆ ಮೇಲೆ ಅನುಷ್ಠಾನ ಮಾಡಬೇಕು. ಇತರ ಕಾರ್ಯಗಳನ್ನು ಬದಿಗಿಟ್ಟಾದರೂ ಈ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಸಲಹೆ ನೀಡಿದರು. ನನೆಗುದಿಗೆ ಬಿದ್ದಿರುವ ಕೖಷ್ಣಾ ಮೇಲ್ದಂಡೆ, ಮಹದಾಯಿ, ಕಾರಂಜಾ, ಸಿಂಗಟಾಲೂರು ಏತ ನೀರಾವರಿ ಯೋಜನೆಗಳ ಅನುಷ್ಠಾನ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ತಮ್ಮ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ನೀಡಿದ ಪ್ರಾಮುಖ್ಯತೆಯನ್ನು ವಿವರಿಸಿದರು. ನಂಜುಂಡಪ್ಪ ಆಯೋಗದ ವರದಿಯನ್ವಯ 39 ತಾಲೂಕುಗಳಲ್ಲಿ ಹೆಚ್ಚಿನವು ಈ ಭಾಗದಲ್ಲಿದ್ದು, ಅವುಗಳಿಗೆ ಪ್ರಾಮುಖ್ಯತೆ ನೀಡಿದ್ದರೂ ಇನ್ನೂ ನಿರೀಕ್ಷಿತ ಗುರಿ ತಲುಪಿಲ್ಲ ಎಂದರು. 2008ರಿಂದ 2013ರ ಬಿಜೆಪಿ ಸರ್ಕಾರದ ಅವಧಿಯನ್ನು ಸುವರ್ಣ ಯುಗ ಎಂದೇ ಭಾವಿಸಿದ್ದೇನೆ. ವಿವಿಧ ಯೋಜನೆಗಳಿಗೆ ಸಂಬಂಧಿಸಿ ತೀರ್ಪಗಳು ಬಂದಿತು. ಏನೆಲ್ಲ ಆದ್ಯತೆ ನೀಡಿದೆವು ಎಂಬುದನ್ನು ಬಿಎಸ್​ವೈ ವಿವರಿಸಿದರು. ಅಲ್ಲದೆ, ಬೆಳಗಾವಿಯಲ್ಲಿ ಅಧಿವೇಶನ ಸುಗಮವಾಗಿ ಅಧಿವೇಶನ ನಡೆಸುವ ಉದ್ದೇಶದಿಂದ ಸುವರ್ಣಸೌಧದ ಆವರಣಲ್ಲಿ ಪ್ರವಾಸೋದ್ಯಮ ಇಲಾಖೆ, ಕೆಎಸ್​ಟಿಡಿಸಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಶಾಸಕರ ಭವನ ನಿರ್ವಿುಸಬೇಕು ಎಂದು ಸಿಎಂಗೆ ಮನವಿ ಮಾಡಿದರು.

ಎರಡು ನದಿ ವ್ಯಾಜ್ಯದ ಕಾನೂನು ತಂಡಕ್ಕೆ ಕೊಟ್ಟಿದ್ದು 93 ಕೋಟಿ ರೂಪಾಯಿ

ಬೆಳಗಾವಿ: ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಹಾಗೂ ವಿವಿಧ ನೀರಾವರಿ ಯೋಜನೆಗಳ ಕುರಿತು ವಿಧಾನಸಭೆಯಲ್ಲಿ ಮಹತ್ವದ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಸರ್ಕಾರ ನೀರಾವರಿ ಯೋಜನೆಗಳ ವ್ಯಾಜ್ಯಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡಿರುವ ಸಂಗತಿ ಬಯಲಾಗಿದೆ. ಮಹದಾಯಿ ವಿಚಾರದಲ್ಲಿ ಸುಪ್ರಿಂಕೋರ್ಟ್ ಹಾಗೂ ನ್ಯಾಯಾಧಿಕರಣದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಕಾನೂನು ತಂಡಕ್ಕೆ 2005-06ರಿಂದ 2021-22ರ ಅವಧಿಯಲ್ಲಿ 23,97,86,704 ರೂ.ಗಳನ್ನು ಸರ್ಕಾರ ಪಾವತಿಸಿದೆ. ಇದರಲ್ಲಿ ಮುಖ್ಯವಾಗಿ ಫಾಲಿ ಎಸ್.ನಾರಿಮನ್ ಅವರಿಗೆ 3,28,24,000 ರೂ., ಮೋಹನ್ ಕಾತರಕಿ ಅವರಿಗೆ 3,94,69,000 ರೂ. ನೀಡಲಾಗಿದ್ದರೆ, ಅನಿತಾ ಶಣೈ ಎಂಬುವರಿಗೆ 2,85,18,866 ರೂ. ಫೀಸ್ ನೀಡಲಾಗಿದೆ. ಇದೇ ರೀತಿ ಕಾವೇರಿ, ಮೇಕೆದಾಟು ವ್ಯಾಜ್ಯದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕಾನೂನು ತಂಡಕ್ಕೆ ಒಟ್ಟು 69 ಕೋಟಿ ರೂ.ಗಳನ್ನು ಈ ವರೆಗೆ ವೆಚ್ಚ ಮಾಡಲಾಗಿದೆ. 2001ರಿಂದ 2021ರ ಅವಧಿಗೆ ಇಷ್ಟು ಖರ್ಚು ಮಾಡಲಾಗಿದೆ. ಇಲ್ಲೂ ಸಹ ನಾರಿಮನ್ ಹೆಸರು ಮುಂಚೂಣಿಯಲ್ಲಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಪಡೆದಿರುವ ಸಾಮಾಜಿಕ ಕಾರ್ಯಕರ್ತ ಮರಿಲಿಂಗಗೌಡ ಮಾಲಿಪಾಟೀಲ್, ಇಷ್ಟೊಂದು ಹಣ ವೆಚ್ಚ ಮಾಡಿದರೂ ರಾಜ್ಯಕ್ಕೆ ಖುಷಿ ಪಡುವ ತೀರ್ಪಗಳು ಬಂದಿಲ್ಲ. ಸರ್ಕಾರದಿಂದ ನ್ಯಾಯವಾದಿಗಳಿಗೆ ತಿಂಗಳ ಸಂಬಳ ಕೊಡಲಾಗಿದೆಯೋ, ಗೌರವಧನ ಕೊಡಲಾಗಿದೆಯೋ ಎಂದು ಪ್ರಶ್ನಿಸಿದ್ದೆ. ಇದು ವೃತ್ತಿ ಶುಲ್ಕ ಎಂದು ಸರ್ಕಾರ ಉತ್ತರಿಸಿದೆ ಎಂದು ವಿವರಿಸಿದರು.

ಜಿಲ್ಲೆಗಳ ಮಧ್ಯೆ ಕುಸ್ತಿ ನಡೆದೀತು!: ಯಾರನ್ನೋ ಖುಷಿಪಡಿಸಲೆಂದು ಮುಂದಾಲೋಚನೆಯಿಲ್ಲದೆ ತುಂಗಭದ್ರಾ ಅಣೆಕಟ್ಟೆ ಮೇಲ್ಭಾಗದ ನೀರಾವರಿ ಯೋಜನೆಗಳಿಗೆ ನೀರು ಹಂಚಿದರೆ, ಅಣೆಕಟ್ಟೆ ಕೆಳಭಾಗದಲ್ಲಿ ನೀರಿನ ಅಭಾವ ತಲೆದೋರಿ ಆಂತರಿಕ ಸಂಘರ್ಷ ಮತ್ತು ಜಿಲ್ಲೆಗಳ ಮಧ್ಯೆ ಕುಸ್ತಿ ನಡೆದೀತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಎಚ್ಚರಿಸಿದರು. ತುಂಗಭದ್ರಾ ಜಲಾಶಯದಲ್ಲಿ 31 ಟಿಎಂಸಿ ಅಡಿ ಹೂಳು ತುಂಬಿ ನೀರು ಶೇಖರಣೆ ಪ್ರಮಾಣ ಕುಸಿದಿದ್ದು, ಮೇಲ್ಭಾಗದ ಭದ್ರಾ ಮೇಲ್ದಂಡೆ ಹಾಗೂ ಸಿಂಗಟಾಲೂರು ಯೋಜನೆಗಳಿಗೆ ತಲಾ 19 ಟಿಎಂಸಿ ಅಡಿ ನೀರು ಹಂಚಲಾಗಿದೆ. ಅಣೆಕಟ್ಟೆ ಕೆಳಭಾಗದ ಕೊನೆಯಲ್ಲಿರುವ ರಾಯಚೂರು ಜಿಲ್ಲೆ ರೈತರು ನೀರಿಗಾಗಿ ಪ್ರತಿವರ್ಷ ಚಳವಳಿ ನಡೆಸುತ್ತಿದ್ದು, ಆ ಭಾಗದಲ್ಲಿ ನೀರಿನ ಅಭಾವ ನಿವಾರಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಪರಿಹರಿಸಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು. ಅನುದಾನ ಹೆಚ್ಚಿಸಬೇಕು, ಈ ಭಾಗದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಹಾಗೂ ಯೋಜನೆಗಳನ್ನು ಕಾಲಮಿತಿಯಲ್ಲಿ ಮುಕ್ತಾಯ ಮಾಡಬೇಕೆಂದು ಉತ್ತರ ಕರ್ನಾಟಕ ಭಾಗದ ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ಒಕ್ಕೊರಲಿನಿಂದ ಒತ್ತಾಯಿಸಿದರು. ಬುಧವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ನೀರಾವರಿ ಮತ್ತು ಯೋಜನೆ ಕುರಿತ ಚರ್ಚೆ ಅವಧಿಯಲ್ಲಿ ಪ್ರತಿಯೊಬ್ಬರಿಗೂ 10ರಿಂದ 15 ನಿಮಿಷಗಳ ಅವಕಾಶ ನೀಡಲಾಗಿತ್ತು. ಈ ವೇಳೆ ಉತ್ತರ ಕರ್ನಾಟಕ ಭಾಗದ ಹಲವಾರು ಶಾಸಕರು ತಮ್ಮ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಕಾಂಗ್ರೆಸ್​ನ ಈಶ್ವರ್ ಖಂಡ್ರೆ ಮಾತನಾಡಿ, ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ. ಆದರೆ, ಇಲ್ಲಿ ಯಾವುದೇ ಕಲ್ಯಾಣ ನಡೆಯುತ್ತಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ್ದರೂ, ಇದರಿಂದ ಮಹತ್ವದ ಕೆಲಸ ನಡೆಯುತ್ತಿಲ್ಲ. ಅನುದಾನ ಮೊದಲೇ ಇಲ್ಲ. ಇಲ್ಲಿ 20 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳಿದ್ದು, ಅವುಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡಬೇಕು ಎಂದರು. ಪರಿಸ್ಥಿತಿ ಈ ರೀತಿ ಇರುವುದರಿಂದ ನಾವು ಯಾವ ರೀತಿಯ ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಸರ್ಕಾರಿ ಶಾಲೆ-ಕಾಲೇಜುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ಎಂದಿನಂತೆ ಪ್ರತ್ಯೇಕ ರಾಜ್ಯ ಕೇಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೀದರ್ ಜಿಲ್ಲೆ ತುಳಿತಕ್ಕೆ ಒಳಗಾಗಿದೆ. ಇಲ್ಲಿನ ಜನರು ಇಂದಿಗೂ ಕುಡಿಯುವ ನೀರು, ರಸ್ತೆ, ನೀರಾವರಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೆರೆ ರಾಜ್ಯ ತೆಲಂಗಾಣದಲ್ಲಿ ರೈತರಿಗೆ 24 ಗಂಟೆ ವಿದ್ಯುತ್ ನೀಡುತ್ತಾರೆ. ಆದರೆ, ನಮ್ಮಲ್ಲಿ ಕೇವಲ 6 ಗಂಟೆ ನೀಡುತ್ತಾರೆ. ಕನಿಷ್ಠ 12 ಗಂಟೆ ವಿದ್ಯುತ್ ನೀಡಬೇಕೆಂದು ಬಂಡೆಪ್ಪ ಕಾಶೆಂಪುರ ಆಗ್ರಹಿಸಿದರು.

ಅನುಭವ ಮಂಟಪ್ಪದ ಕಾಮಗಾರಿ ತಕ್ಷಣ ಆರಂಭಿಸಬೇಕು. ನಮ್ಮ ಭಾಗದ ರಸ್ತೆಗಳನ್ನು ಉತ್ತಮ ಪಡಿಸಬೇಕು.

| ಶರಣು ಸಲಗರ ಶಾಸಕ

ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳು ಸಾಕಷ್ಟು ಇವೆ. ಇದನ್ನು ರ್ಚಚಿಸಲು ಅಧಿವೇಶವನ್ನು ಕನಿಷ್ಠ 2 ದಿನಗಳ ಮಟ್ಟಿಗೆ ವಿಸ್ತರಣೆ ಮಾಡಬೇಕು.

| ಎ.ಎಸ್.ಪಾಟೀಲ್ ನಡಹಳ್ಳಿ ಶಾಸಕ

ಪ್ರತ್ಯೇಕ ಜಿಲ್ಲೆ ಘೋಷಣೆ: ಬೆಳಗಾವಿ ಜಿಲ್ಲೆಯಲ್ಲಿನ ಜನರು ಪ್ರಯಾಣಕ್ಕೆ ಹೆಚ್ಚು ಸಮಯ ವ್ಯಯ ಮಾಡುತ್ತಿದ್ದಾರೆ. ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ 200 ಕಿ.ಮೀ. ದೂರ ಇದೆ. ಅಥಣಿ- ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಣೆ ಮಾಡಬೇಕು. ಈ ಭಾಗದ ಜನರು ತಮ್ಮ ಸವಲತ್ತು ಪಡೆಯಲು ನೂರಾರು ಕಿ.ಮೀ. ಸಂಚಾರ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಪ್ರತ್ಯೇಕ ಜಿಲ್ಲೆ ಸ್ಥಾಪನೆ ಮಾಡುವ ಅವಶ್ಯಕತೆ ಇದೆ ಎಂದು ಪಿ.ರಾಜೀವ್ ಒತ್ತಾಯಿಸಿದರು. ಅಲ್ಲದೆ, ವಿಶ್ವ ಸಂಸ್ಥೆ ನೀಡಿರುವ ಮಾನದಂಡಗಳ ಪ್ರಕಾರ ಪ್ರತಿ 30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕಿದೆ. ಆದರೆ, ನಮ್ಮ ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚಿವೆ. ದುರಂತ ಎಂದರೆ, ಅವಶ್ಯಕತೆ ಇರುವ ಕಡೆ ಇಲ್ಲ. ನಮ್ಮ ಭಾಗದಲ್ಲಿ 1.5 ಲಕ್ಷ ಜನರಿದ್ದು, ಒಂದು ಆರೋಗ್ಯ ಕೇಂದ್ರ ಇದೆ. ಅದೂ ಸಮರ್ಪಕವಾಗಿ ಕಾರ್ಯನಿ ರ್ವಹಿಸುತ್ತಿಲ್ಲವೆಂದ ರಾಜೀವ್, ಸರ್ಕಾರದ ಮುಂದೆ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಮೇಲ್ಮನೆಯಲ್ಲಿ 8 ವಿಧೇಯಕಗಳ ಅಂಗೀಕಾರ: ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, ಕರ್ನಾಟಕ ನಗರ ಪಾಲಿಕೆಗಳು, ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ ಸೇರಿ ಒಟ್ಟು 8 ವಿಧೇಯಕಗಳನ್ನು ಮೇಲ್ಮನೆಯಲ್ಲಿ ಬುಧವಾರ ರ್ಚಚಿಸಿ, ಅಂಗೀಕರಿಸಲಾಯಿತು. ಸಂಬಂಧಿಸಿದ ಸಚಿವರು ವಿಧೇಯಕಗಳ ಕುರಿತು ವಿವರವಾದ ವಿಷಯವನ್ನು ಮಂಡಿಸಿದ ನಂತರ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಪ್ರಶ್ನೆಗಳನ್ನು ಕೇಳಿ, ಉತ್ತರ ಕಂಡುಕೊಂಡರು. ಕೆಲವರು ವೈಯಕ್ತಿಕವಾಗಿ ವಿರೋಧ ವ್ಯಕ್ತಪಡಿಸಿದರೆ, ಕೆಲ ಮಾರ್ಪಾಡುಗಳಿಗೂ ಸಲಹೆ ನೀಡಿದರು. ಇವೆಲ್ಲವುಗಳ ಮಧ್ಯೆ ಮೇಲ್ಮನೆಯಲ್ಲಿ ಅಂಗೀಕಾರ ಪಡೆದವು.

ತಸ್ತೀಕ್ ಹೆಚ್ಚಿಸಿ ಕಾಶಿ ಯಾತ್ರೆಗೂ ಹಣ ಕೊಡಿ: ಕೈಲಾಸ- ಮಾನಸ ಸರೋವರ ಯಾತ್ರೆ ಕೈಗೊಂಡ ಯತ್ರಾರ್ಥಿಗಳಿಗೆ ನೀಡಲಾಗುವ ಸಹಾಯಧನ ಮತ್ತು ‘ಸಿ’ ಗ್ರೇಡ್ ದೇವಸ್ಥಾನಗಳ ಅರ್ಚಕರಿಗೆ ನೀಡುವ ತಸ್ತೀಕ್ ಮೊತ್ತವನ್ನು 15 ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂದು ವಿಧಾನಪರಿಷತ್​ನಲ್ಲಿ ಬಿಜೆಪಿಯ ಡಾ.ತೇಜಸ್ವಿನಿ ಗೌಡ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮುಜರಾಯಿ, ಹಜ್ ಹಾಗೂ ವಕ್ಪ್ ಸಚಿವರು, ರಾಜ್ಯದಲ್ಲಿ ಕೈಲಾಸ-ಮಾನಸ ಸವರೋವರ ಯಾತ್ರಿಗಳಿಗೆ ನೀಡಲಾಗುವ ಸಹಾಯಧನವನ್ನು ಹೆಚ್ಚಿಸಲು ಕ್ರಮವಹಿಸುತ್ತೇನೆ. ಕಾಶಿ ಯಾತ್ರೆಗೂ ಸಹಾಯಧನ ನೀಡಲು ಸಿಎಂ ಬಳಿ ರ್ಚಚಿಸುತ್ತೇನೆ ಎಂದು ಹೇಳಿದರು. ರಾಜ್ಯದಲ್ಲಿ 34,219 ‘ಸಿ’ ವರ್ಗದ ದೇವಸ್ಥಾನಗಳಿವೆ. ಇಲ್ಲಿನ ಆರ್ಥಿಕ ವರಮಾನ ಕಡಿಮೆ ಇರುವುದರಿಂದ ತಸ್ತೀಕ್ ಕೂಡ ಕಡಿಮೆ ಇದೆ. ಇಂತಹ ದೇವಸ್ಥಾನಗಳನ್ನು ದಾನಿಗಳಿಗೆ ದತ್ತು ನೀಡಲು ಆಲೋಚಿಸುತ್ತಿದ್ದೇವೆ. ಕರೊನಾ ಪರಿಸ್ಥಿತಿಯಲ್ಲಿ ಹೆಚ್ಚಿನ ವೇತನ ನೀಡುವುದು ಕಷ್ಟವಾಗಿದೆ. ಆದರೂ, ಈ ವಿಚಾರವನ್ನು ಸಿಎಂ ಬಳಿ ಪ್ರಸ್ತಾಪಿಸಿ, ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದರು.

ಅಕ್ರಮ ಒತ್ತುವರಿ ಜಾಗ ತೆರವು: ರಾಜ್ಯದಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಮುಲಾಜಿಲ್ಲದೆಯೇ ತೆರವು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು. ಮೇಲ್ಮನೆಯಲ್ಲಿ ಕಾಂಗ್ರೆಸ್​ನ ಬಿ.ಕೆ.ಹರಿಪ್ರಸಾದ್, ರಾಜ್ಯದಲ್ಲಿ ಗೋಮಾಳ ಜಮೀನು ಅತಿಕ್ರಮವಾಗಿದ್ದು, ಇದರ ಬಗ್ಗೆ ಸರ್ಕಾರ ಗಮನವಹಿಸಬೇಕೆಂದು. ಇದಕ್ಕೆ ಉತ್ತರಿಸಿದ ಆಶೋಕ್, ರಾಜ್ಯದಲ್ಲಿ 19.39 ಲಕ್ಷ ಹೇಕ್ಟರ್ ಪ್ರದೇಶ ಗೋಮಾಳದಲ್ಲಿದೆ. ಗೋಮಾಳ ಮಂಜೂರಾತಿ, ಕೃಷಿ ಮಾಡುತ್ತಿರುವುದು, ಸರ್ಕಾರಿ ಕಟ್ಟಡಗಳ ನಿರ್ಮಾಣ ಸೇರಿ ಎಲ್ಲವನ್ನೂ ಒತ್ತುವರಿ ಎಂದು ಇಲ್ಲೇಖಿಸಲಾಗಿದೆ. ಆದರೆ, ಅಸಲಿಗೆ ಒತ್ತಯವರಿಯಾಗಿರುವುದು 28,872 ಎಕರೆ ಮಾತ್ರ ಎಂದರು. ಒತ್ತುವರಿ ತೆರವಿಗೆ ಈಗಾಗಲೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಸದನ ಸಮಿತಿ ರಚಿಸಲಾಗಿದೆ. ಪ್ರತಿ ಶನಿವಾರ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕ್ರಿಮಿನಲ್ ಕೇಸ್ ಎಚ್ಚರಿಕೆ: ಕೃಷಿ ಜಮೀನನ್ನು ದಾಖಲೆಗಳಲ್ಲಿ ಕೃಷಿಯೇತರ ಜಮೀನು ಎಂದು ತಿದ್ದುಪಡಿ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಆರ್.ಅಶೋಕ ಎಚ್ಚರಿಕೆ ನೀಡಿದರು. ಪರಿಷತ್​ನಲ್ಲಿ ಕಾಂಗ್ರೆಸ್​ನ ಎಂ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿ, ಪ್ರಸ್ತುತ ಪ್ರಮಾಣಪತ್ರ ಅಧಾರಿತ ಭೂ ಪರಿವರ್ತನೆ ತಂತ್ರಾಂಶ ಜಾರಿಗೊಳಿಸುವುದರಿಂದ ನಿಗದಿತ ಅವಧಿಯಲ್ಲಿ ಅರ್ಜಿದಾರರು ಕೋರಿರುವ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ನಂತರ ಭೂಮಿ ತಂತ್ರಾಂಶದಲ್ಲಿ ಪಹಣಿ ಕಾಲಂ 9 ಮತ್ತು 10 ರಲ್ಲಿ ಭೂ ಪರಿತರ್ವನೆ ಎಂಬುದಾಗಿ ಫ್ಲಾಗ್ ಆಗುತ್ತದೆ. ತದನಂತರ ಸರ್ವೆ ನಂಬರ್, ದಾಖಲೆಗಳಲ್ಲಿ ದುರಸ್ಥಿಯಾದ ನಂತರ ಎನ್.ಎ.ಖರಾಬು ಎಂಬುದಾಗಿ ನಮೂದು ಮಾಡಲಾಗಿದೆ ಎಂದು ವಿವರಿಸಿದರು. ಅಲ್ಲದೆ, ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ಅನ್​ಲೈನ್​ನಲ್ಲಿ ತಂತ್ರಾಂಶವನ್ನು ಜಾರಿಗೆ ತಂದಿರುವುದರಿಂದ ಭೌತಿಕವಾಗಿ ಭೂ ಪರಿತರ್ವನೆಗೆ ಆದೇಶ ನೀಡಿಲ್ಲ ಎಂದರು.

ಮತಾಂತರವಾದ ಹೆಣ್ಮಕ್ಕಳ ಕಷ್ಟ-ಕಾರ್ಪಣ್ಯ ತೋರಿಸುವೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ವೈಯಕ್ತಿಕ ಆಹ್ವಾನ ನೀಡುವೆ. ಅವರು ಇಚ್ಛಿಸಿದರೆ ಕರೆದುಕೊಂಡು ಹೋಗಿ ಮತಾಂತರವಾದ ಹೆಣ್ಣುಮಕ್ಕಳ ಕಷ್ಟ-ಕಾರ್ಪಣ್ಯ ತೋರಿಸುವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುವರ್ಣ ವಿಧಾನಸೌಧ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಲವಂತದ ಮತಾಂತರಕ್ಕೆ ಒಳಗಾದ ಹೆಣ್ಣುಮಕ್ಕಳ ಕಷ್ಟ ಡಿ.ಕೆ.ಶಿವಕುಮಾರ್​ಗೆ ಗೊತ್ತಿಲ್ಲ. ಮತಾಂತರವಾದ ನಂತರ ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಸಾಮಾಜಿಕ ಸಾಮರಸ್ಯ, ಸ್ವಾಸ್ಥ್ಯ ಹದಗೆಡಿಸುವ ಈ ಪ್ರಕರಣಗಳನ್ನು ನಿಯಂತ್ರಿಸುವ ಅಗತ್ಯವಿದೆ. ವಸ್ತುಸ್ಥಿತಿ ಮಾಹಿತಿಯಿಲ್ಲದೆ ಮತಾಂತರ ನಿಷೇಧ ತಡೆ ಮಸೂದೆ ಬಗ್ಗೆ ಕಾಂಗ್ರೆಸ್ ನಾಯಕರು ಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದರು. ವಿಕಲಾಂಗರು ಸೇರಿದಂತೆ ಹಲವರಿಗೆ ಆಸೆ-ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದ್ದೇವೆ ಎಂದು ಈಶ್ವರಪ್ಪ ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net