ರಾಜ್ಯದಲ್ಲಿ ಈ ಬಾರಿ ಕೊರೆಯುವ ಚಳಿ:ಪ್ರಸಕ್ತ ತಿಂಗಳ ಕೊನೆಯ ವಾರದಿಂದ ಆರಂಭ

cold up
Published on

ಬೆಂಗಳೂರು: ರಾಜ್ಯದಲ್ಲಿ ಮಳೆ ಕ್ಷೀಣಿಸುತ್ತಿರುವ ಬೆನ್ನಲ್ಲೇ ಈ ಬಾರಿ ವಾಡಿಕೆಗಿಂತ ಅಧಿಕ ಚಳಿ ಇರಲಿದೆ. ಪ್ರಸಕ್ತ ತಿಂಗಳ ಕೊನೆಯ ವಾರದಿಂದ ಆರಂಭವಾಗುವ ಚಳಿ ಜನವರಿವರೆಗೆ ಇರಲಿದೆ.

ಮುಂಗಾರು ಮತ್ತು ಹಿಂಗಾರಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದು, ಮಣ್ಣು ಮತ್ತು ವಾತಾವರಣದಲ್ಲಿ ಹೆಚ್ಚು ತೇವಾಂಶ ಇರುವುದು ಸೇರಿ ಇತರ ಕಾರಣಗಳಿಂದ ಈ ಬಾರಿ ವಾಡಿಕೆಗಿಂತ ಹೆಚ್ಚು ಚಳಿ ಕಾಣಿಸಿಕೊಳ್ಳಲಿದೆ.ಪ್ರಸ್ತುತ ರಾಜ್ಯದಲ್ಲಿ ಅಗಾಗ್ಗೆ ಮೋಡ ಕವಿದ ವಾತಾವರಣ ಜತೆಗೆ ತಣ್ಣನೆ ಗಾಳಿ ಬೀಸುತ್ತಿದೆ. ಬೆಂಗಳೂರು ನಗರ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಚಳಿಯ ಅನುಭವವಾಗುತ್ತಿದೆ. ಚಳಿಗಾಲದಲ್ಲಿ ಉತ್ತರದಿಂದ ದಣ ದಿಕ್ಕಿನತ್ತ ಗಾಳಿ ಬೀಸಲಿದೆ. ಚಳಿಗಾಲ ಶುರುವಾಗುವ ಮುನ್ನ ಮಳೆ ಕಡಿಮೆ ಆಗಲಿದೆ. ಇದರಿಂದ ಕನಿಷ್ಠ ತಾಪಮಾನ ಹಾಗೂ ಗರಿಷ್ಠ ತಾಪಮಾನದಲ್ಲಿ ಸರಾಸರಿ 2-3 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ಕುಸಿತವಾಗಲಿದೆ. ಈ ಹಿನ್ನೆಲೆಯಲ್ಲಿ ತಣ್ಣನೆಯ ಗಾಳಿಯಿಂದ ಜನರಿಗೆ ಮೈನಡುಗುವ ಚಳಿ ಅನುಭವವಾಗಲಿದೆ.

ಲಾ ನಿನಾ ಪರಿಣಾಮ: ರಾಜ್ಯದಲ್ಲಿ ಈ ಬಾರಿ ತುಸು ಚಳಿ ಹೆಚ್ಚು ಇರುವುದಕ್ಕೆ "ಲಾ&ನಿನಾ' ಸಹ ಕಾರಣವಾಗಿದೆ. ಪೂರ್ವ ಹಾಗೂ ಮಧ್ಯ ಫೆಸಿಫಿಕ್​ ಮಹಾಸಾಗರದಲ್ಲಿ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾದರೆ "ಲಾ-ನಿನಾ' ಉಂಟಾಗುತ್ತದೆ.ಇದರ ಪರಿಣಾಮದಿಂದ ಈಶಾನ್ಯ ಮಾರುತಗಳು ದುರ್ಬಲಗೊಂದು ಚಳಿ ಹೆಚ್ಚಳಕ್ಕೆ ಕಾರಣವಾಗಲಿದೆ. ಅಲ್ಲದೆ, ಉತ್ತರದಿಂದ ದಣ ಕಡೆಗೆ ಗಾಳಿ ಬೀಸಿದರೆ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ. ಬಂಗಾಳದ ಉಪಸಾಗರದಿಂದ ಗಾಳಿ ಬೀಸಿದರೆ ಅಥವಾ ದಣದ ಹಿಂದೂ ಮಹಾಸಾಗರದಿಂದ ಗಾಳಿ ಬೀಸಿದರೂ ಕನಿಷ್ಟ ಹಾಗೂ ಗರಿಷ್ಟ ತಾಪಮಾನದಲ್ಲಿ ಉಷ್ಣಾಂಶ ಏರಿಳಿತವಾಗಲಿದೆ.

ಎಚ್ಚರಿಕೆಯಿಂದಿರಿ: ಚಳಿ ಅವಧಿಯಲ್ಲಿ ಉತ್ತರ ಭಾರತದಿಂದ ದಣ ಭಾರತದ ಕಡೆಗೆ ಪ್ರಬಲವಾಗಿ ಶೀತ ಗಾಳಿ ಬೀಸಿದರೆ ನೆಗಡಿ ಮತ್ತು ಕೆಮ್ಮು ಸೇರಿ ಇತರೆ ಕಾಯಿಲೆಗಳು ಬಾಧಿಸಲಿವೆ. ಮುಂಜಾನೆ 4ರಿಂದ 7ಗಂಟೆ ಅವಧಿಯಲ್ಲಿ ಚಳಿ ತೀವ್ರತೆ ಹೆಚ್ಚಿರಲಿದೆ. ಈ ಅವಧಿಯಲ್ಲಿ ವಾಯು ವಿಹಾರ ಹಾಗೂ ವ್ಯಾಯಾಮಕ್ಕೆ ಹೋಗುವವರು ಎಚ್ಚರಿಕೆಯಿಂದ ಇರಬೇಕು. ಉಸಿರಾಟ ಸಮಸ್ಯೆ ಎದುರಿಸುತ್ತಿರುವವರು, ಎಲುಬು, ಕೀಲು ನೋವಿನಿಂದ ಬಳಲುತ್ತಿರುವವರು ಮನೆಯಿಂದ ಆಚೆಗೆ ಹೋಗಬಾರದು ಎನ್ನುತ್ತಾರೆ ತಜ್ಞರು.

ಶುಚಿ ಆಹಾರ ಸೇವಿಸಿ: ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ, ಎದುರಾಗುವ ಸಾಧ್ಯತೆಗಳಿವೆ. ಕಾಲಿನ ಹಿಮ್ಮಡಿ, ತುಟಿ ಸೇರಿ ಕೈಕಾಲಿನ ಚರ್ಮ ಒಣಗಲಿದೆ. ಈ ಬಗ್ಗೆ ಜನರು ಅಗತ್ಯ ಮುನ್ನಚ್ಚರಿಕಾ ಕ್ರಮವಹಿಸಬೇಕು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜತೆಗೆ ಕುದಿಸಿ ಆರಿಸಿದ ನೀರು, ಬಿಸಿ ಹಾಗೂ ಶುಚಿಯಾದ ಆಹಾರ, ಫ್ರೀಡ್ಜ್​ನಲ್ಲಿ ಹೆಚ್ಚು ಹೊತ್ತು ಇಟ್ಟ ಆಹಾರ ಸೇವಿಸಬಾರದು. ಧೂಳಿಯಿಂದ ದೂರ ಇರಬೇಕು, ಚೆನ್ನಾಗಿ ಒಣಗಿಸಿದ ಬಟ್ಟೆಯನ್ನು ಮೈ ತುಂಬಾ ಧರಿಸುವುದು ಸೂಕ್ತ ಎನ್ನುತ್ತಾರೆ ವೈದ್ಯರು.

ಎಲ್ಲೆಲ್ಲಿ ಚಳಿ ಜಾಸ್ತಿ: ಬೆಂಗಳೂರುಗಿಂತ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಚಳಿ ಹೆಚ್ಚಿರುತ್ತದೆ. ವಿಜಯಪುರ,ಬೀದರ್​, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಹಾವೇರಿ, ಉಡುಪಿ, ದಣಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ರಾಮನಗರ, ಬೀದರ್​, ರಾಯಚೂರು, ಕಲಬುರಗಿ, ಯಾದಗಿರಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ರಾತ್ರಿ ವೇಳೆ ಚಳಿ ಅಧಿಕವಾಗಿರುತ್ತದೆ. ಸಂಜೆ,ಮುಂಜಾನೆ ಇಬ್ಬನಿ ಹೆಚ್ಚಾಗಿ ಬೀಳುತ್ತದೆ. ಮೋಡ ಮುಸುಕಿದ ವಾತಾವರಣ ಇದ್ದಾಗ ಹಗಲಿನಲ್ಲೂ ಚಳಿಯ ಅನುಭವಾಗುತ್ತದೆ. ತಂಪಾದ ಗಾಳಿ ಬೀಸಿದರೂ ಚಳಿ ಜಾಸ್ತಿ ಇರುತ್ತದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಕಳೆದ ವರ್ಷ ಮಳೆ ಕಡಿಮೆಯಾಗಿತ್ತು. ಆದರೆ, ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದೀಗ "ಲಾ-ನಿನಾ' ಶುರುವಾಗುತ್ತಿದೆ. ಇದೆಲ್ಲಾ ಕಾರಣಗಳಿಂದ ರಾಜ್ಯದಲ್ಲಿ ಚಳಿ ಅಧಿಕವಾಗಿರಲಿದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶವೂ ಕುಸಿತವಾಗಲಿದೆ.

| ಡಾ.ಶ್ರೀನಿವಾಸರೆಡ್ಡಿ. ಹವಾಮಾನ ತಜ್ಞ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net