ಸದನದಲ್ಲಿ ಬಟ್ಟೆ ಬಿಚ್ಚಿದ ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಮಂಡನೆ; ನಾನು ಅಂಗಿ ಬಿಚ್ಚಿಲ್ಲ ಎಂದು ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

Shirt
Published on

ಬೆಂಗಳೂರು: ಸದನದಲ್ಲಿ ಬಟ್ಟೆಯನ್ನು ಬಿಚ್ಚಿ ಅಮಾನತಾಗಿರುವ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ವಿರುದ್ಧ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಸೋಮವಾರ ಹಕ್ಕುಚ್ಯುತಿ ಮಂಡಿಸಿದ್ದು, ಇದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಪ್ರಶ್ನೇತ್ತರ ಕಲಾಪದ ನಂತರ ಆರಗ ಜ್ಞಾನೇಂದ್ರ ಪ್ರಸ್ತಾಪಿಸಿದ್ದ ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮತಿಸಿದರು. ಜ್ಞಾನೇಂದ್ರ ಹಕ್ಕು ಚ್ಯುತಿ ಕುರಿತು ಮಾತನಾಡಲು ಆರಂಭಿಸಿದಾಗ, ಸಭಾಧ್ಯಕ್ಷರ ಸ್ಥಾನ ಮುಖ್ಯಮಂತ್ರಿಗಳ ಸ್ಥಾನಕ್ಕಿಂತ ದೊಡ್ಡದು. ಆದರೆ, ಸಂಗಮೇಶ್ ಸ್ಪೀಕರ್ ಸ್ಥಾನದ ಘನತೆಗೆ ಕುಂದುಂಟಾಗುವಂತೆ ನಡೆದುಕೊಂಡಿದ್ದಾರೆ. ಸ್ಪೀಕರ್ ಸ್ಥಾನದ ಎದುರು ಬಂದು ಬಟ್ಟೆ ಬಿಚ್ಚಿದ್ದಲ್ಲದೆ, ಸದನದ ಹೊರಗೆ ಮಾಧ್ಯಮಗಳಿಗೆ ಸ್ಪೀಕರ್ ವಿರುದ್ಧ ಅಸಭ್ಯವಾದ ಹೇಳಿಕೆ ನೀಡುತ್ತಿದ್ದಾರೆ. ಇದು ಹಕ್ಕುಚ್ಯುತಿ ಆಗುತ್ತದೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಆಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಅಂತಹವರು ಸದನದಲ್ಲಿ ಇಲ್ಲದಾಗ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದು ಸರಿಯಲ್ಲ. ಅವರ ವಿರುದ್ಧದ ಆರೋಪಗಳಿಗೆ ಸಮಜಾಯಿಷಿ ನೀಡಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡಬಾರದು ಎಂದು ಸ್ಪೀಕರ್‌ ಅವರನ್ನು ಒತ್ತಾಯಿಸಿದರು.

ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದ ಉಂಟಾಗಿದ್ದಲ್ಲದೆ, ಕಾಂಗ್ರೆಸ್ ಶಾಸಕರು ಸ್ಪೀಕರ್ ಮುಂಭಾಗಕ್ಕೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಿಡಿ-ಸಿಡಿ ಅನ್ನಿ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಈ ಹಿಂದೆ ಸದನದಲ್ಲಿ ಅಂಗಿ ಬಿಚ್ಚಿದ್ದ ಪ್ರಸಂಗವನ್ನು ಪ್ರತಿಭಟನೆ ವೇಳೆ ಕಾಂಗ್ರೆಸ್ ಶಾಸಕರು ಪ್ರಸ್ತಾಪಿಸಿದರು. ಆಗ ವಿಪಕ್ಷ ನಾಯಕ ಸಿದ್ದರಾಮಯ್ಯ, ತಮ್ಮ ಶಾಸಕರಿಗೆ ‘ಸಿಡಿ-ಸಿಡಿ ಎಂದು ಘೋಷಣೆ ಕೂಗಿ’ ಎಂದು ಹೇಳಿಕೊಟ್ಟರು. ಆನಂತರ ಶಾಸಕರು, ಇತ್ತೀಚೆಗೆ ಬಿಡುಗಡೆಯಾದ ಸಚಿವರೊಬ್ಬರ ಸಿಡಿ ಬಗ್ಗೆಯೂ ಘೋಷಣೆ ಕೂಗಿದರು.

ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿ, ಹಕ್ಕುಚ್ಯುತಿ ಬಗ್ಗೆ ಚರ್ಚಿಸಲು ಎಲ್ಲ ಪಕ್ಷದವರಿಗೂ ಆಹ್ವಾನಿಸಿದರು. ಆದರೆ, ಕಾಂಗ್ರೆಸ್ ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಆರಗ ಜ್ಞಾನೇಂದ್ರ ಮಂಡಿಸಿದ್ದ ಹಕ್ಕುಚ್ಯುತಿ ಪ್ರಸ್ತಾವನೆಯನ್ನು ಹಕ್ಕುಚ್ಯುತಿ ಸಮಿತಿಗೆ ವರ್ಗಾಯಿಸಿ ಸ್ಪೀಕರ್ ಆದೇಶಿಸಿದರು.

ಭಾವುಕರಾದ ಸ್ಪೀಕರ್: ಸಭಾಧ್ಯಕ್ಷ ಸ್ಥಾನದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಮಾತನಾಡಿರುವ ಕುರಿತಂತೆ ಭಾವುಕರಾಗಿ ಪ್ರತಿಕ್ರಿಯಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಧ್ಯಕ್ಷರ ಸ್ಥಾನದ ಬಗ್ಗೆ ಬೇಜವಾಬ್ದಾರಿಯಿಂದ ಮಾತನಾಡಿದ್ದಕ್ಕೆ ತನಿಖೆ ಆಗಬೇಕಿದೆ. ಹಿಂದೆ ಈ ಸ್ಥಾನದಲ್ಲಿದ್ದವರು ಯಾರ್ಯಾರು? ಹೇಗೆಲ್ಲ? ನಡೆದುಕೊಂಡಿದ್ದಾರೆ ಎಂಬುದು ತಿಳಿದಿದೆ. ನಾನು ಇರುವವರೆಗೆ ಈ ಸ್ಥಾನದ ಘನತೆ ಕಾಪಾಡಲು ಬದ್ಧನಾಗಿದ್ದೇನೆ. ನಿಮ್ಮ (ಬಿಜೆಪಿ-ಕಾಂಗ್ರೆಸ್) ಹಗುರ ರಾಜಕಾರಣವನ್ನು ಸದನದೊಳಗೆ ಮಾಡಲು ಬಿಡುವುದಿಲ್ಲ. ಸಭಾಧ್ಯಕ್ಷ ಸ್ಥಾನಕ್ಕೆ ನೀಡಬೇಕಾದ ಗೌರವ ಎಲ್ಲರೂ ನೀಡಬೇಕು ಎಂದು ಹೇಳಿದರು.

ಮಾರ್ಷಲ್ ಹರಿದಿದ್ದು: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಬಟ್ಟೆ ಹರಿದ ಕುರಿತಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರಿಂದ ಆ ಬಗ್ಗೆ ಸ್ಪಷ್ಟನೆ ನೀಡಿದ ಗೂಳಿಹಟ್ಟಿ ಶೇಖರ್, ಅದನ್ನು ನಾನು ಹರಿದಿದ್ದಲ್ಲ. ಮಾರ್ಷಲ್‌ಗಳು ನನ್ನ ಅಂಗಿಯನ್ನು ಹರಿದರು. ಅದನ್ನು ನಾನು ತೋರಿಸಿದೆ. ಆದರೆ, ಈಗ ನಾನೇ ಅಂಗಿ ಬಿಚ್ಚಿದೆ ಎಂದು ಹೇಳಲಾಗುತ್ತಿದೆ ಎಂದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net