ವಾನ್ಯ ಮಂದಿರದ ವಿಗ್ರಹ ಕದ್ದವ ಸೆರೆ : ಹಲವು ದೇವಸ್ಥಾನಗಳಲ್ಲಿ ನಡೆದ ಕಳ್ಳತನದಲ್ಲಿ ಶಾಮೀಲು

Arrest Kaidhi
Published on

ಬದಿಯಡ್ಕ: ವಾನ್ಯ ಶ್ರೀ ಅಯ್ಯಪ್ಪ ಮಂದಿರದಿಂದ ಬೆಳ್ಳಿಯ ವಿಗ್ರಹವನ್ನು ಕಳವುಗೈದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಕಸಬಾ ಕೊಲದ ಕೆ.ಇಬ್ರಾಹಿಂ ಕಲಂದರ್ (42) ಬಂಧಿತ ಕಳ್ಳ. ನ.4ರಂದು ಬೆಳಗ್ಗೆ ಭಜನಾ ಮಂದಿರದಲ್ಲಿ ದರೋಡೆ ನಡೆದಿತ್ತು. ಅದೇ ದಿನ ನೆಲ್ಲಿಕಟ್ಟೆಯ ಗುರುದೇವ ಮಂದಿರ ಮತ್ತು ಪೊಯಿನಾಚಿ ಅಯ್ಯಪ್ಪ ದೇವಸ್ಥಾನದಲ್ಲೂ ಕಳವು ನಡೆದಿತ್ತು. ಈ ತಂಡದಲ್ಲಿ ಇಬ್ರಾಹಿಂ ಕಲಂದರ್ ಇದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾಸರಗೋಡು ಪೊಲೀಸ್ ಉಪವಿಭಾಗದ ಎಡನೀರು ವಿಷ್ಣುಮಂಗಲ ದೇವಸ್ಥಾನದಲ್ಲೂ ಕಳವು ನಡೆದಿದ್ದು, ಇದು ಇತ್ತೀಚೆಗೆ ನಡೆದ ಮೊದಲ ದರೋಡೆ ಪ್ರಕರಣವಾಗಿತ್ತು. ಈ ಪ್ರಕರಣದ ಆರೋಪಿಗಳನ್ನು ಪತ್ತೆ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಮತ್ತೆ ಮೂರು ಕಡೆಗಳಲ್ಲಿ ಕಳವು ನಡೆದಿತ್ತು. ಬಳಿಕ ಕರ್ನಾಟಕದ ಬಂಟ್ವಾಳ ಸೇರಿದಂತೆ ವಿವಿಧೆಡೆ ಎರಡು ಕಳವು ಪ್ರಕರಣ ನಡೆದಿತ್ತು.

ಇದೇ ವೇಳೆ ಕಾಸರಗೋಡಿನ ಹಣಕಾಸು ಸಂಸ್ಥೆಯೊಂದರಲ್ಲಿ ದರೋಡೆಗೆ ತಂಡವೊಂದು ಬರುತ್ತಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಇದರ ಬೆನ್ನಲ್ಲೇ ಸ್ಥಳೀಯರ ನೆರವಿನಿಂದ ನಿಗಾ ವಹಿಸಿ ಭಾನುವಾರ ಬೆಳಗ್ಗೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ತೆರಳುತ್ತಿದ್ದ ತಂಡವೊಂದು ದೈಗೋಳಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಕೋಡಿ ಉಳ್ಳಾಲದ ಫೈಸಲ್ ಮತ್ತು ಮೊಗಳ್ಳಿಯ ಸೈಯದ್ ಅವಾನ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ನಾಲ್ವರು ಪರಾರಿಯಾಗಿದ್ದರು. ಈ ಪೈಕಿ ಪರಾರಿಯಾಗಿದ್ದರಲ್ಲಿ ಒಬ್ಬರು ಇಬ್ರಾಹಿಂ ಕಲಂದರ್ ಆಗಿದ್ದು, ಆತನನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸೂಚಿಸಿವೆ. ತಂಡ ಪ್ರಯಾಣಿಸುತ್ತಿದ್ದ ಕಾರಿನಿಂದ ಗ್ಯಾಸ್ ಕಟ್ಟರ್ ಸೇರಿದಂತೆ ವಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ದೈಗೋಳಿಯಿಂದ ಪರಾರಿಯಾದ ತಂಡ ಫೆಬ್ರವರಿ 8ರಂದು ಅಡ್ಯನಡ್ಕದ ಕರ್ಣಾಟಕ ಬ್ಯಾಂಕ್‌ನ ದರೋಡೆ ಮಾಡಿತ್ತು. ಅಂದು ಬಂಧಿತರಾಗಿ ಬಿಡುಗಡೆಗೊಂಡ ತಂಡವೇ ಹೊಸ ದರೋಡೆಗಳಿಗೆ ಇಳಿದಿದೆ ಎಂದು ಪೊಲೀಸರು ವಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net