ಗರ್ಭಕೋಶದಲ್ಲಿದ್ದ 4.5 ಕೆಜಿ ಗಡ್ಡೆ ಹೊರತೆಗೆದ ವೈದ್ಯರು! ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

Doddaballapur Doctor
Published on

ದೊಡ್ಡಬಳ್ಳಾಪುರ: ಮಹಿಳೆಯೊಬ್ಬರ ಗರ್ಭಕೋಶದ ಸುತ್ತ ಬೆಳೆದಿದ್ದ 4.5 ಕೆಜಿ ತೂಕದ ಗಡ್ಡೆ ಹೊರ ತೆಗೆಯುವಲ್ಲಿ ಯಶಸ್ವಿಯಾಗಿರುವ ದೊಡ್ಡಬಳ್ಳಾಪುರದ ತಾಯಿ-ಮಗು ಸರ್ಕಾರಿ ಆಸ್ಪತ್ರೆ ವೈದ್ಯರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿಲ್ಪಾ (35) ಅವರು ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಮಹಿಳೆಯನ್ನು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ 4 ರಿಂದ 5 ಕೆಜಿಯಷ್ಟು ಗಡ್ಡೆ ಪತ್ತೆಯಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪ್ರಸೂತಿ ಸೀರೋಗ ತಜ್ಞೆ ಡಾ.ಕೆ.ಎಲ್.ಅರ್ಚನಾ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಇದೊಂದು ಅಚ್ಚರಿ

ಸಾಮಾನ್ಯವಾಗಿ ಮಹಿಳೆಯರ ಗರ್ಭಕೋಶ, ಅಂಡಾಶಯಗಳಲ್ಲಿ ಗಡ್ಡೆಯು 100ಕ್ಕೆ 10 ಮಂದಿಯಲ್ಲಿ ಬಹಳ ಸಣ್ಣದಾಗಿ ಕಂಡುಬರುತ್ತದೆ. ಆದರೆ, ಅಚ್ಚರಿ ಎಂಬಂತೆ ಈ ಮಹಿಳೆಯಲ್ಲಿ 4ರಿಂದ 5 ಕೆಜಿ ಗಾತ್ರದ ಗಡ್ಡೆ ಪತ್ತೆಯಾಗಿದೆ. ಮಹಿಳೆ ಒಂದೆರಡು ದಿನ ತಡವಾಗಿ ದಾಖಲಾಗಿದ್ದರೆ ಜೀವಕ್ಕೆ ಹಾನಿಯಾಗುತ್ತಿತ್ತು. ಸದ್ಯ ಗರ್ಭಕೋಶದ ಸುತ್ತ ಬೆಳೆದಿದ್ದ ದೊಡ್ಡ ಗಾತ್ರದ ಗಡ್ಡೆ ಹೊರತೆಗೆಯಲಾಗಿದ್ದು, ಮಹಿಳೆ ಆರೋಗ್ಯವಾಗಿದ್ದಾರೆ ಎಂದು ವೈದ್ಯೆ ಅರ್ಚನಾ ತಿಳಿಸಿದ್ದಾರೆ.

ಸವಾಲಿನ ಪ್ರಕರಣ

ಇದೊಂದು ಗಂಭೀರ ಮತ್ತು ಸವಾಲದ ಪ್ರಕರಣವಾಗಿತ್ತು. ಬಿಪಿ, ಉಸಿರಾಟ ನಿಯಂತ್ರಣಕ್ಕೆ ಪಡೆದು, ಶಸಚಿಕಿತ್ಸೆ ಆರಂಭಿಸಿದೆವು. ರಕ್ತದ ಅಗತ್ಯತೆ ಇದ್ದಿದ್ದರಿಂದ ಮುಂಚಿತವಾಗಿಯೇ 4 ಬಾಟಲ್‌ಗಳಷ್ಟು ರಕ್ತವನ್ನು ತರೆಸಿಕೊಂಡಿದ್ದೇವು ಎಂದು ಶಸಚಿಕಿತ್ಸೆ ತಂಡದ ಡಾ.ಪ್ರೇಮಲತಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net