ನಾಯಕತ್ವ ಬದಲಾವಣೆ ಬಗ್ಗೆ MI ಕೋಚ್​ ಸಮರ್ಥನೆ: ಸಿಡಿದೆದ್ದ ರೋಹಿತ್​ ಪತ್ನಿ, ಕಿಡಿ ಹೊತ್ತಿಸಿದ ರಿತಿಕಾ​ ಕಾಮೆಂಟ್​

Rohith Ritika
Published on

ನವದೆಹಲಿ: ಮುಂಬೈ ಇಂಡಿಯನ್ಸ್​ ತಂಡದ ಯಶಸ್ವಿ ನಾಯಕನಾಗಿದ್ದರೂ ಈ ಬಾರಿಯ ಐಪಿಎಲ್​ ಆವೃತ್ತಿಯ ಆರಂಭಕ್ಕೂ ಮುನ್ನ ನಾಯಕತ್ವದಿಂದ ಕೆಳಗಿಳಿಸುವ ಮೂಲಕ ರೋಹಿತ್​ ಶರ್ಮಾಗೆ ಫ್ರಾಂಚೈಸಿ ಶಾಕ್​ ನೀಡಿದೆ. ಈ ಸುದ್ದಿ ಹಳೆಯದಾದರೂ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಮುಂಬೈ ತಂಡದ ಕೋಚ್​ ಮಾರ್ಕ್ ಬೌಷರ್ ನೀಡಿರುವ ಕಾರಣ.

ಹೌದು, ರೋಹಿತ್​ರನ್ನು ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ, ಆ ಸ್ಥಾನದಲ್ಲಿ ಹಾರ್ದಿಕ್​ ಪಾಂಡ್ಯರನ್ನು ಕೂರಿಸಲಾಗಿದೆ. ಈ ಬದಲಾವಣೆ ಯಾಕೆ ಎಂಬ ಪ್ರಶ್ನೆಗೆ ಮಾರ್ಕ್​ ಬೌಷರ್​ ಇದೀಗ ಅಸಲಿ ಉತ್ತರ ನೀಡಿದ್ದಾರೆ. ಆದರೆ, ಬೌಷರ್​ ಉತ್ತರಕ್ಕೆ ರೋಹಿತ್​ ಪತ್ನಿ ರಿತಿಕಾ ಸಾಜ್ದೇಹ್​ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಅಷ್ಟಕ್ಕೂ ಬೌಷರ್​ ಹೇಳಿದ್ದೇನು ಅಂತಾ ನೋಡುವುದಾದರೆ, ಸ್ಪೋರ್ಟ್ಸ್ ಚಾನೆಲ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಬೌಷರ್​, ಇದು ಸಂಪೂರ್ಣವಾಗಿ ಕ್ರೀಡಾ ನಿರ್ಧಾರವಾಗಿದೆ. ನನ್ನ ಮಟ್ಟಿಗೆ, ಇದು ಕೇವಲ ಪರಿವರ್ತನೆಯ ಹಂತವಾಗಿದೆ, ಅನೇಕ ಜನರು ಭಾವನಾತ್ಮಕರಾಗಿದ್ದಾರೆ ಮತ್ತು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಿರ್ಧಾರವು ಒಬ್ಬ ಆಟಗಾರನಾಗಿ, ಒಬ್ಬ ವ್ಯಕ್ತಿಯಾಗಿ ರೋಹಿತ್ ಅವರಿಂದ ಅತ್ಯುತ್ತಮ ಆಟವನ್ನು ಹೊರತರಲಿದೆ ಎಂದು ನಾನು ಭಾವಿಸುತ್ತೇನೆ. ಅವರು ಮೈದಾನಕ್ಕಿಳಿದು ಆಟವನ್ನು ಆನಂದಿಸಲು ಮತ್ತು ಉತ್ತಮ ರನ್‌ ಗಳಿಸಲು ಬಿಡಿ ಎಂದು ಸ್ಮಾಶ್ ಸ್ಪೋರ್ಟ್ಸ್ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

ರಿತಿಕಾ ರಿಪ್ಲೈ ಏನು?

ಸ್ಮಾಶ್ ಸ್ಪೋರ್ಟ್ಸ್ ಪಾಡ್‌ಕಾಸ್ಟ್‌ ಕಾಮೆಂಟ್​ ಬಾಕ್ಸ್​ನಲ್ಲಿ ಪ್ರತಿಕ್ರಿಯೆ ನೀಡಿರುವ ರೋಹಿತ್​ ಪತ್ನಿ ರಿತಿಕಾ, "ಇದರಲ್ಲಿ ಅನೇಕ ವಿಷಯಗಳು ತಪ್ಪಾಗಿವೆ" ಎನ್ನುವ ಮೂಲಕ ನಾಯಕತ್ವ ಬದಲಾವಣೆ ಬಗ್ಗೆ ಮತ್ತೊಮ್ಮೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ರಿತಿಕಾ ಅವರ ಪ್ರತಿಕ್ರಿಯೆ ನೋಟಿದ ನೆಟ್ಟಿಗರು ಅವರ ಪರವಾಗಿ ಧ್ವನಿ ಎತ್ತಿದ್ದಾರೆ. ಐದು ಬಾರಿ ಐಪಿಎಲ್​ ಟ್ರೋಫಿ ಗೆಲ್ಲಿಸಿಕೊಟ್ಟ ಆಟಗಾರನಿಗೆ ಈ ರೀತಿ ಅಗೌರವ ತೋರಬಹುದಾ ಎಂದು ಮುಂಬೈ ಫ್ರಾಂಚೈಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ritika

ಅಂದಹಾಗೆ ಗುಜರಾತ್​ ಟೈಟಾನ್ಸ್​ ತಂಡದಿಂದ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ಮುಂಬೈ ತಂಡ ಖರೀದಿ ಮಾಡಿತು. ಹಾರ್ದಿಕ್​ ಅವರನ್ನು ಮುಂಬರುವ ಐಪಿಎಲ್​ 17ನೇ ಆವೃತ್ತಿಗೆ ಮುಂಬೈ ಇಂಡಿಯನ್ಸ್​ ತಂಡದ ಹೊಸ ನಾಯಕರನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್​ ಪರ 5 ಬಾರಿ ಐಪಿಎಲ್​ ಟ್ರೋಫಿ ಗೆದ್ದಿದ್ದ ರೋಹಿತ್​ ಶರ್ಮ ಅವರ “ಐಪಿಎಲ್​ ನಾಯಕತ್ವ ಯುಗ’ ಅಂತ್ಯಗೊಂಡಂತಾಗಿದೆ. ಅಲ್ಲದೆ ಐಪಿಎಲ್​ನಲ್ಲಿ ಮೊದಲ ಬಾರಿಗೆ ಟೀಮ್​ ಇಂಡಿಯಾದ ಪೂರ್ಣಪ್ರಮಾಣದ ನಾಯಕನೊಬ್ಬ ಸಾಮಾನ್ಯ ಆಟಗಾರನಾಗಿ ಆಡುವಂತಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net