

ಬೆಂಗಳೂರು :ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು, ಸಂಗೊಳ್ಳಿ ರಾಯಣ್ಣನವರ ಉದಾಹರಣೆ ಮೂಲಕ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ ಎಂದು ಎರಡು ಬಾರಿ ಹೇಳಿಕೆ ನೀಡಿದ್ದಾರೆ. ಅವರ ಪಕ್ಷದವರೇ ಸಿಎಂಗೆ ಮೋಸ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.
ಸೋಮವಾರ ಸುದ್ದಿಗಾರರಿಗೆ ಮಾತನಾಡಿದ ಅವರು, ಸಿಎಂ ಕುರ್ಚಿಗೆ ಕಾಂಗ್ರೆಸ್ ಹಲವರು ಟವಲ್ ಹಾಕಿದ್ದರೆ, ಡಿಸಿಎಂ ಡಿಕೆಶಿ ಸ್ಟಿಕ್ಟರ್ ಅಂಟಿಸಿದ್ದಾರೆ.ಮುಡಾ ಪ್ರಕರಣದಲ್ಲಿ ನಾವ್ಯಾರೂ ಆರ್ಟಿಐ ಅರ್ಜಿ ಹಾಕಿಲ್ಲ. ಅವರ ಪಕ್ಷದವರೇ ಎಲ್ಲ ದಾಖಲೆ ಹೊರಗೆ ತಂದಿದ್ದಾರೆ. ಮ್ಯೂಸಿಕಲ್ ಚೇರ್ ಮಾಡುತ್ತಿರುವವರು ಪಟಾಕಿ ಇಡುತ್ತಿದ್ದಾರೆ. ಅವರು ಪಟಾಕಿ ಒಡೆದಾಗ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ಯಾರಂಟಿಗಳಿಂದ ಹಿಮಾಚಲ ಪ್ರದೇಶ ಆರ್ಥಿಕ ದುಸ್ಥಿತಿಗೆ ತಲುಪಿದೆ. ಕರ್ನಾಟಕ ಪಾಪರ್ ಆದರೂ ಪರವಾಗಿಲ್ಲ, ನಮ್ಮ ಬೇಳೆ ಬೇಯಬೇಕೆಂದು ಕಾಂಗ್ರೆಸ್ ಯೋಚಿಸಿದೆ. ರಾಜ್ಯದಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲವಾದರೆ ಸ್ವಯಂ ನಿವೃತ್ತಿ ಪಡೆಯಬೇಕೆಂಬ ಪರಿಸ್ಥಿತಿ ಇದೆ.ನಿಷ್ಠಾವಂತ ಅಧಿಕಾರಿಗಳಿಗೆ ಬದುಕುವ ಗ್ಯಾರಂಟಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 60 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸಲು ತಯಾರಿ ನಡೆದಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ. ಬಿಪಿಎಲ್ ಕುಟುಂಬಗಳಿಗೆ ಈಗಾಗಲೇ ಆಹಾರ ಇಲಾಖೆಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ.ಇದಕ್ಕಾಗಿ ಖಾಸಗಿ ಏಜೆನ್ಸಿ ನೇಮಕ ಮಾಡಲಾಗಿದೆ. ಕಾರ್ಡ್ ರದ್ದುಪಡಿಸಿ ಗ್ಯಾರಂಟಿ ಯೋಜನೆಯ ಹಣ ಉಳಿಸಲಾಗುತ್ತಿದೆ. ಜನರಿಗೆ ಗೊತ್ತಾಗದಂತೆ ತೆರಿಗೆ ವಿಧಿಸುವುದು ಹೇಗೆಂದು ತಂತ್ರ ಮಾಡಲು ಸಮಿತಿ ನೇಮಿಸಲಾಗಿದೆ ಎಂದು ಅಶೋಕ್ ತಿಳಿಸಿದರು.