ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಅನುಷ್ಠಾನಕ್ಕೆ ಬಿಜೆಪಿ, ಜೆಡಿಎಸ್​ ವಿರೋಧ

ashoka
Published on

ಬೆಂಗಳೂರು: ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅನುಷ್ಠಾನಕ್ಕೆ ನಮ್ಮ ವಿರೋಧವಿದೆ. ಇದರ ವಿರುದ್ಧ ಜನಾಂದೋಲನ ರೂಪಿಸುವುದಾಗಿ ಪ್ರತಿಪಕ್ಷದ ನಾಯಕ ಆರ್​. ಅಶೋಕ್​ ಹೇಳಿದ್ದಾರೆ.

ಭಾರತೀಯ ವಿದ್ಯಾಭವನದಲ್ಲಿ ಸೋಮವಾರ ಗ್ರೇಟರ್​ ಬೆಂಗಳೂರು ಪ್ರಾಧಿಕಾರ-2024 ಬಿಲ್​ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡಿಗರ ಹಿತಾಸಕ್ತಿ ವಿರುದ್ಧ ಇರುವ ಬಿಲ್​ಗೆ ಬಿಜೆಪಿ ಮತ್ತು ಜೆಡಿಎಸ್​ ಜೊತೆಗೆ ಕಾಂಗ್ರೆಸ್​ನವರೂ ವಿರೋಧಿಸುತ್ತಿದ್ದಾರೆ. ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಭಜಿಸಬಾರದು. ಮೇಯರ್​ ಅಧಿಕಾರವನ್ನು ಮೊಟುಕುಗೊಳಿಸಲು, ಕನ್ನಡಿಗರಿಂದ ಅಧಿಕಾರ ಕಸಿಯಲು, ಚುನಾವಣೆ ಮುಂದೂಡಲು ಸರ್ಕಾರ, ಬೆಂಗಳೂರನ್ನು ಐದು ಭಾಗಗಳಾಗಿ ತುಂಡು ಮಾಡಲು ಹೊರಡಿಸಿದೆ.ಸಂಸದರು, ಶಾಸಕರಿಗೆ ಮತದಾನದ ಅಧಿಕಾರ ತೆಗೆಯಲಾಗಿದೆ. ಪಾಲಿಕೆ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಆದರೆ, ಮುಖ್ಯಮಂತ್ರಿ, ಬೆಂಗಳೂರಿನ ಸಚಿವರೆಲ್ಲರೂ ಪ್ರಾಧಿಕಾರದ ಅಧ್ಯರು ಮತ್ತು ಮೇಲ್ವಿಚಾರಕರಾಗಿ ಇರಬಹುದು ಎಂದು ಹೇಳಲಾಗಿದೆ. ಇದು ಯಾವ ರೀತಿಯ ಅಧಿಕಾರ ವಿಕೇಂದ್ರೀಕರಣ? ಎಂದು ಪ್ರಶ್ನಿಸಿದರು.

ಮೇಯರ್​ ಅವಧಿ ಕನಿಷ್ಠ ಎರಡೂವರೆ ವರ್ಷ ಇರಲಿ ಎನ್ನುವ ಸಲಹೆಗಳನ್ನು ಸಂವಾದದಲ್ಲಿ ಹಾಜರಿದ್ದ ಶಾಸಕ ಡಾ.ಸಿ.ಎನ್​.ಅಶ್ವತ್ಥನಾರಾಯಣ ಸೇರಿದಂತೆ ಬಿಜೆಪಿ, ಜೆಡಿಎಸ್​ನ ಶಾಸಕರು, ಮಾಜಿ ಮೇಯರ್​ಗಳು, ಮಾಜಿ ಪಾಲಿಕೆ ಸದಸ್ಯರು ನೀಡಿದರು. ವಿಧಾನ ಪರಿಷತ್ತಿನ ವಿರೋಧ ಪದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಸಿ.ಎನ್​ ಅಶ್ವತ್ಥನಾರಾಯಣ ಮತ್ತಿತರರಿದ್ದರು.

ಒಬ್ಬ ಮೇಯರ್​ ಇರಲಿ:

ಇಡೀ ದೇಶಕ್ಕೆ ಒಬ್ಬ ಪ್ರಧಾನಿ, ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಇರುವಂತೆ ಬೆಂಗಳೂರು ನಗರಕ್ಕೆ ಒಬ್ಬ ಮೇಯರ್​ ಇರಬೇಕು. ಮಂಡನೆಯಾಗಿರುವ ವಿಧೇಯಕವನ್ನು ತಿದ್ದುಪಡಿ ಮಾಡಬೇಕು. ತಿದ್ದುಪಡಿಗೆ ವಿಳಂಬವಾದರೆ 198 ವಾರ್ಡ್​ಗಳಿಗೆ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ಜನಾಂದೋಲನ ನಡೆಸಲಾಗುವುದು. ವಿಧೇಯಕದಿಂದ ಉಂಟಾಗುವ ಸಮಸ್ಯೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುತ್ತೇವೆ ಎಂದು ಅಶೋಕ್​ ಹೇಳಿದರು. ಬಿಲ್​ನಲ್ಲಿ ಬದಲಾವಣೆ ಆಗಲೇಬೇಕು. ದಿಲ್ಲಿ, ಹೈದರಾಬಾದ್​, ಮುಂಬೈ ಸೇರಿದಂತೆ ಅನೇಕ ನಗರಗಳಲ್ಲಿ ನಗರ ವಿಭಜನೆ ಯೋಜನೆಗಳು ವಿಫಲವಾಗಿರುವ ಕಾರಣ ಬೆಂಗಳೂರು ವಿಭಜನೆ ಬೇಡ. ಆದರೆ, ಬಿಬಿಎಂಪಿಯ ಆಡಳಿತಾತ್ಮಕ ವಿಭಜನೆ ಆಗಲಿ. ವಲಯವಾರು ಉನ್ನತ ಅಧಿಕಾರಿಗಳನ್ನು ನೇಮಿಸಿ ಕಮೀಷನರ್​ ಹೊಂದಿರುವ ಅಧಿಕಾರಗಳನ್ನು ಅವರಿಗೆ ಹಂಚಿಕೆ ಮಾಡಲಿ. ವ್ಯವಸ್ಥಿತ ಯೋಜನೆಗಳನ್ನು ರೂಪಿಸಲು ಬಿಎಂಟಿಸಿ, ಜಲಮಂಡಳಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಸೇರಿದಂತೆ ಬಿಬಿಎಂಪಿ ಸಂಬಂಧಿಸಿದ ಸಂಸ್ಥೆಗಳು ಬಿಬಿಎಂಪಿ ವ್ಯಾಪ್ತಿಗೆ ತರಲಿ. ಜನರ ಪಾಲ್ಗೊಳ್ಳುವಿಕೆ ಹೆಚ್ಚಿಸಲಿ ಎಂದರು.

ಬೆಂಗಳೂರಿನ ಒಂದು ಭಾಗ ಅನ್ಯರಿಗೆ!

ಜಿಬಿಎ ಸ್ವರೂಪದ ಕುರಿತು ಪ್ರಾತ್ಯಕೆ ನೀಡಿದ, ಜಿಬಿಎ ರಚನಾ ಸಮಿತಿ ಸದಸ್ಯ ರವಿಚಂದರ್​, ನಾವು ನೀಡಿದ ಮೂಲ ವರದಿಯನ್ನು ಡಸ್ಟ್​ಬಿನ್​ಗೆ ಹಾಕಲಾಗಿದೆ. ಸರ್ಕಾರ ಸದನದಲ್ಲಿ ಮಂಡಿಸಿರುವ ವರದಿಯನ್ನು ಗಮನಿಸಿದರೆ ಶೇ.20ರಷ್ಟು ಮಾತ್ರ ನಾವು ನೀಡಿರುವ ಅಂಶ ಉಳಿದುಕೊಂಡಿದೆ. ಬೆಂಗಳೂರನ್ನು 5 ಭಾಗ ಮಾಡಿದರೆ, ಅದರಲ್ಲಿ ಒಂದು ಭಾಗ ಕನ್ನಡಿಗರ ಕೈತಪ್ಪಲಿದೆ. ಆದರೆ, ರಾಜಕೀಯ ವಿಚಾರಗಳಿಗೆ ನಾನು ಟಿಪ್ಪಣಿ ಮಾಡುವುದಿಲ್ಲ ಎಂದರು.

ಸರ್ಕಾರ ಡಸ್ಟ್​ಬಿನ್​ ಹಾಕಿರುವ ವರದಿ ಕುರಿತು ನಾವು ಚರ್ಚೆ ಮಾಡಬೇಕಾ. ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರೂ. ಆದಾಯ ಸಂಗ್ರಹಿಸಲು ಅವಕಾಶಗಳಿವೆ. ಬಿಬಿಎಂಪಿ ಚುನಾವಣೆ ನಡೆದು 4 ವರ್ಷಗಳಾಗಿವೆ. ಇಂತಹ ಅಗತ್ಯ ವಿಷಯಗಳನ್ನು ಬಿಟ್ಟು 12 ಸಾವಿರ ಕೋಟಿ ರೂ.ವೆಚ್ಚದ ಸುರಂಗ ಮಾರ್ಗ, ಗ್ರೇಟರ್​ ಬೆಂಗಳೂರು ಮಾಡಲು ಹೊರಟಿರುವುದು ಏಕೆ?

|ಮುನಿರತ್ನ, ಶಾಸಕ.

ಜಿಬಿಎ ವಿರುದ್ಧ ನಾಗರಿಕ ಸಂಟನೆಗಳ ಮೂಲಕ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಬೇಕು. ನಗರದ ಅಭಿವೃದ್ಧಿಗೆ ಪೂರಕವಲ್ಲದ ಬಿಲ್​ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಚುನಾವಣೆ ಮುಂದೂಡಲು ಮಾಡಿರುವ ಪ್ಲಾನ್​ ಇದಾಗಿದೆ.

|ತೇಜಸ್ವಿ ಸೂರ್ಯ, ಸಂಸದ.

ಬಿಬಿಎಂಪಿ ಬಜೆಟ್​ನ 10 ಸಾವಿರ ಕೋಟಿ ರೂ.ಪೈಕಿ ಸರ್ಕಾರವೇ 7 ಸಾವಿರ ಕೋಟಿ ರೂ.ನೀಡುತ್ತದೆ. ನಗರದ ಅಭಿವೃದ್ಧಿಗೆ ಆದಾಯ ಅತಿಮುಖ್ಯ. ಬಿಬಿಎಂಪಿಯಲ್ಲಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗಬೇಕು. ದೇಶದ ಬೇರೆ ನಗರದಲ್ಲಿ ವಿಫಲವಾಗಿರುವ ನಗರ ವಿಭಜನೆ ಯೋಜನೆಯನ್ನು ಕೈ ಬಿಡಬೇಕು.

|ಟಿ.ಎ.ಶರವಣ. ಎಂಎಲ್ಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net