

ಬೆಂಗಳೂರು: ಸರ್.ಎಂ.ವಿಶ್ವೇಶ್ವರಯ್ಯ ಅವರು ಭಾರತದ ಮಹಾನ್ ಇಂಜಿನಿಯರ್‌ಗಳಲ್ಲಿ ಒಬ್ಬರು. ಅವರು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಭಾರತದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ನೀಡಿ ಗೌರವಿಸಲಾಯಿತು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ 15 ದೇಶದ ಮಹಾನ್ ಇಂಜಿನಿಯರ್ ಮತ್ತು ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನ. ದೇಶಕ್ಕಾಗಿ ಸರ್.ಎಂ. ವಿಶ್ವೇಶ್ವರಯ್ಯನವರು ಮಾಡಿದ ಮಹತ್ತರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಲು, ಭಾರತ ಸರ್ಕಾರವು 1968 ರಲ್ಲಿ ಅವರ ಜನ್ಮದಿನವನ್ನು ಇಂಜಿನಿಯರ್ ದಿನವನ್ನಾಗಿ ಆಚರಿಸಲು ಘೋಷಿಸಿತು, ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 15 ಅನ್ನು ಇಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಕೈಗಾರಿಕೆಗಳ ಅಭಿವೃದ್ಧಿ ಮತ್ತು ವಿಸ್ತರಣೆಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಅನುಪಮವಾಗಿದೆ. ರಾಜ್ಯದಲ್ಲಿ ರೈಲ್ವೆ ಜಾಲದ ವಿಸ್ತರಣೆ, ಅತಿದೊಡ್ಡ ನೀರಾವರಿ ಜಲಾಶಯವಾಗಿದ್ದ ಕೃಷ್ಣರಾಜ್ ಸಾಗರ ಜಲಾಶಯದ ನಿರ್ಮಾಣವನ್ನು ಸೇರಿದಂತೆ ಅನೇಕ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ವಿಶ್ವೇಶ್ವರಯ್ಯ ಅವರು ದೂರ ದೃಷ್ಠಿಕೋನ ಹೊಂದಿದ್ದರು. ದೇಶ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಸಮಾಜದ ಕಳಕಳಿ ಅವರಲ್ಲಿತ್ತು. ಇಂತಹ ಭಾರತ ರತ್ನರ ಕನಸನ್ನು ನನಸಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಇಂಜಿನಿಯರ್ ಗೂ ವಿಶ್ವೇಶ್ವರಯ್ಯನವರು ಮಾರ್ಗದರ್ಶಿಗಳು. ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುವ ಮೂಲಕ ನಮಗೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯದ 75 ವರ್ಷಗಳಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ ಮತ್ತು ದೇಶದ ಆರ್ಥಿಕತೆಯು ಸಾಕಷ್ಟು ಪ್ರಬಲವಾಗಿದೆ. ನಮ್ಮ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ನಮ್ಮ ಪ್ರಯತ್ನಗಳು ಅದನ್ನು ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯನ್ನು ಮಾಡುವತ್ತ ಸಾಗುತ್ತಿವೆ. ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮುಂದಿನ 24 ವರ್ಷಗಳು ನಮ್ಮ ದೇಶವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಮ್ಮ ಕರ್ತವ್ಯದ ಸುವರ್ಣ ಅವಧಿಯಾಗಿದೆ. ಇತ್ತೀಚೆಗೆ ನಡೆದ ಜಿ 20 ಸಮಾವೇಶದಲ್ಲಿ ಗೌರವಾನ್ವಿತ ಪ್ರಧಾನಿ ನರೇಂದ್ರ ಅವರ ನೇತೃತ್ವದಲ್ಲಿ ಅನೇಕ ವಿಷಯಗಳನ್ನು ಚರ್ಚಿಸುವ ಮೂಲಕ ಅರ್ಥಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಇಂದು ಜಗತ್ತಿನಲ್ಲಿ ಪರಿಸರ ಅಸಮತೋಲನವು ಗಂಭೀರ ಸಮಸ್ಯೆಯಾಗಿದೆ. ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಪ್ರಚಾರ ನಮ್ಮೆಲ್ಲರ ಹೊಣೆಯಾಗಿದೆ. ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಗೆ ಹೆಚ್ಚಿನ ಕೆಲಸ ಮಾಡುವ ಅಗತ್ಯವಿದೆ. ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಫ್ಕೆಸಿಸಿಐ ಅಧ್ಯಕ್ಷ ಗೋಪಾಲ್ ರೆಡ್ಡಿ, ವೋಲ್ವೋ ಸಮೂಹದ ಅಧ್ಯಕ್ಷ ಕಮಲ್ ಬಾಲಿ ಮತ್ತಿತರರಿದ್ದರು.