ಚೈತ್ರಾ ಕುಂದಾಪುರ ಬಂಧನದ ಹಿಂದಿದೆ ಷಡ್ಯಂತ್ರ: ಪ್ರಮೋದ್ ಮುತಾಲಿಕ್​

Chaithra Kundapura Muthalik
Published on

ಧಾರವಾಡ: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಚೈತ್ರಾ ಕುಂದಾಪುರ ಮತ್ತಿತರ ಆರೋಪಿಗಳು ಸಿಕ್ಕಿಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.

ಚೈತ್ರಾ ಕುಂದಾಪುರ ಬಂಧನದ ಹಿಂದೆ ಷಡ್ಯಂತ್ರವಿದೆ. ಅವರು ಯಾವುದೋ ಷಡ್ಯಂತ್ರಕ್ಕೆ ಸಿಲುಕಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಇಂದು ಧಾರವಾಡದಲ್ಲಿ ಈ ವಿಚಾರವಾಗಿ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಪುನೀತ್ ಕೆರೆಹಳ್ಳಿ ಮೇಲೆ ಗೂಂಡಾ ಕಾಯ್ದೆ ಹಾಕಿದ್ದಾರೆ. ಇದು ಅವಶ್ಯಕತೆ ಇರಲಿಲ್ಲ. ಚೈತ್ರಾ ಕುಂದಾಪುರ ಕೃತ್ಯದ ಹಿಂದೆ ಸಂಶಯಾಸ್ಪದ ಚಟುವಟಿಕೆ ನಡೆದಿದೆ. ರಾಜ್ಯದಲ್ಲಿ ಅನೇಕ ಹಿಂದೂ ಕಾರ್ಯಕರ್ತರ ಮೇಲೆ ಪಿತೂರಿ ನಡೆಯುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಲಪ್ಪಜ್ಜ ಸ್ವಾಮೀಜಿ ಅವರ ಹೆಸರೂ ಇದರಲ್ಲಿ ಕೇಳಿ ಬಂದಿದೆ. ಅವರನ್ನು ಹತ್ತಿರದಿಂದ ನಾನು ಬಲ್ಲೆ. ಅವರದ್ದೂ ದೊಡ್ಡ ಮಠ, ಅವರೂ ನಿರ್ದೋಷಿಯಾಗಿದ್ದಾರೆ. ವ್ಯವಸ್ಥಿತವಾಗಿ ಸಿಕ್ಕಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿ. ಇದರ ಹಿಂದೆ ಏನೋ ಇದೆ. ಚೈತ್ರಾ ಈ ಕೃತ್ಯ ಮಾಡಿಲ್ಲ ಎಂಬುದು ನನ್ನ ಅಭಿಪ್ರಾಯ. ಅವರು ನಿರ್ದೋಷಿಯಾಗಿ ಹೊರಬರುತ್ತಾರೆ. ಪ್ರಕರಣದ ಕುರಿತು ಸಂಪೂರ್ಣ ತನಿಖೆ ಆಗಲಿ. ಅವರು ತಪ್ಪಿತಸ್ಥರಾಗಿದ್ದರೆ ಶಿಕ್ಷೆಯಾಗಲಿ. ಕೋರ್ಟ್ ಏನು ತೀರ್ಪು ನೀಡುತ್ತದೋ ಅದಕ್ಕೆ ನಾನು ಬದ್ಧ ಎಂದು ಮುತಾಲಿಕ್ ಹೇಳಿದ್ದಾರೆ.

ಹಿಂದೂ ಕಾರ್ಯಕರ್ತರನ್ನು ಕಾಂಗ್ರೆಸ್‌ನವರು ಸಿಲುಕಿ ಹಾಕಿಸುತ್ತಿದ್ದಾರೆ. ಕಾಂಗ್ರೆಸ್‌ನವರೇ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದಿದ್ದರು. ಮತಾಂತರ, ಗೋಹತ್ಯೆ ಕಾನೂನು ವಾಪಸ್ ಪಡೆದುಕೊಳ್ಳುತ್ತೇವೆ ಎಂದಿದ್ದರು. ಈ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದರು. ಬಜರಂಗದಳ ಒಂದು ನೆಪ ಮಾತ್ರ. ಹಿಂದೂ ಸಂಘಟನೆಗಳನ್ನು ಬ್ಯಾನ್ ಮಾಡುವ ವಿಚಾರ ಅವರದ್ದಾಗಿದೆ ಎಂದು ಮುತಾಲಿಕ್ ಹೇಳಿದ್ದಾರೆ.

ಗೋವಿಂದಬಾಬು ಪೂಜಾರಿ ಇಂದಿರಾ ಕ್ಯಾಂಟೀನ್ ಸಂಬಂಧ ಇದು ನಡೆದಿದೆ. ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಕೂಸು. ಇದನ್ನು ಬಿಜೆಪಿಯವರಿಗೆ ಏಕೆ ಟೆಂಡರ್ ಕೊಟ್ಟರು? ಎಂದೂ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net