

ಬೆಂಗಳೂರು: ರಸ್ತೆಬದಿಯ ಗಾಡಿಗಳಲ್ಲಿ, ಮಾರಾಟ ಕೇಂದ್ರಗಳಲ್ಲಿ ಇಟ್ಟಿರುತ್ತಿದ್ದ ಎಳನೀರನ್ನು ಕಳವು ಮಾಡುವುದನ್ನೇ ಚಾಳಿ ಮಾಡಿಕೊಂಡಿದ್ದವನನ್ನು ಎಳನೀರು ಮಾರಾಟಗಾರರೇ ರಾತ್ರಿ ಇಡೀ ಕಾದು ಕುಳಿತು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಡಿವಾಳ ನಿವಾಸಿ ಮೋಹನ್ ಬಂಧಿತ ಕಳ್ಳ. ಇನ್ನೊಬ್ಬ ಹಿಡಿಯಲು ಹೋದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಈತ ಹಗಲಿನಲ್ಲಿ ರಸ್ತೆಗಳಲ್ಲಿ ಓಡಾಡಿ ಗುರುತಿಸಿಕೊಂಡು ರಾತ್ರಿ ವಾಹನದಲ್ಲಿ ಎಳನೀರು ಕಳವು ಮಾಡಿಕೊಂಡು ಹೋಗುತ್ತಿದ್ದ. ಬೆಂಗಳೂರಿನ ದಾಸರಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರದಲ್ಲಿ ಸುಮಾರು 2 ಸಾವಿರ ಎಳನೀರನ್ನು ಕಳವು ಮಾಡಿದ್ದ ಈತನ ಬಗ್ಗೆ ಮಾರಾಟಗಾರರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರಿಗೆ ದೂರು ನೀಡಿ ಅಷ್ಟಕ್ಕೇ ಸುಮ್ಮನಾಗದ ಮಾರಾಟಗಾರರು, ಯಾರು ಎಳನೀರು ಕಳವು ಮಾಡುತ್ತಿದ್ದಾರೆ ಎಂಬುದನ್ನು ರೆಡ್ ಹ್ಯಾಂಡೆಡ್ ಆಗಿ ಪತ್ತೆ ಹಚ್ಚಲು ರಾತ್ರಿ ಇಡೀ ಕಾದು ಕುಳಿತಿದ್ದರು. ಬೆಳಗಿನ ಜಾವದ ಸುಮಾರಿಗೆ ಇಬ್ಬರು ವಾಹನದಲ್ಲಿ ಬಂದು ಕಳವು ಮಾಡಲು ಮುಂದಾದಾಗ ಇವರು ಮೋಹನ್ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಈತನ ಜೊತೆ ಇದ್ದ ಮತ್ತೊಬ್ಬ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಮೋಹನ್ನನ್ನು ಹಿಡಿದು ಕಟ್ಟಿ ಹಾಕಿದ ಎಳನೀರು ಮಾರಾಟಗಾರರು ನಂತರ ಆತನನ್ನು ಬಾಗಲಗುಂಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.