

ಸಿಂಧನೂರು; ತಾಲೂಕಿನ ವ್ಯಾಪ್ತಿಯ ಮಸ್ಕಿ ಹೆದ್ದಾರಿ ಮಾರ್ಗದ ಬೂತಲದಿನ್ನಿ ಮತ್ತು ಕಲ್ಲೂರು ಗ್ರಾಮಗಳ ನಡುವಿನ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುತ್ತಿದ್ದು, ಈ ಹಿನ್ನೆಲೆ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಶನಿವಾರ ಮತ್ತು ಭಾನುವಾರ ರಾತ್ರಿ ಮತ್ತೇ ಕುಸಿದಿದ್ದು ಇದರಿಂದ ಸೋಮವಾರ ಈ ಮಾರ್ಗದ ಸಂಚಾರ ಸ್ಥಗಿತಗೊಳಿಸಲಾಗಿದೆ. ಸವಾರರು ಸುತ್ತುವರೆದು ತಾಲೂಕು ಕೇಂದ್ರಗಳಿಗೆ ತೆರಳಬೇಕಾಗಿದೆ.
ಈ ಮಾರ್ಗದ ಎರಡು ಕಡೆ ಸೇತುವೆ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಮಳೆ ಮತ್ತು ಚೆಕ್ ಡ್ಯಾಂ ತುಂಬಿ ನೀರು ಹರಿಯುತ್ತಿರುವುದರಿಂದ ಕೊಚ್ಚಿ ಹೋಗಿದೆ. ಇನ್ನೆಷ್ಟು ಬಾರಿ ಈ ರಸ್ತೆ ಕುಸಿಯುತ್ತಿದೆ ಎಂದು ತಿಳಿಯದು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯಡಿ 18 ಕೋಟಿ ರೂ. ವೆಚ್ಚದಲ್ಲಿ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ -150ಎ ವ್ಯಾಪ್ತಿಗೊಳಪಡುವ ಸಿಂಧನೂರು-ಮಸ್ಕಿ ಮಧ್ಯದಲ್ಲಿ ಏಳು ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ.
ಇದನ್ನೂ ಓದಿ: ಡಬಲ್ ಡೆಕ್ಕರ್ನಿಂದ ರಸ್ತೆ, ಸೇತುವೆಗಿಲ್ಲ ಆತಂಕ
ಇದರಲ್ಲಿ ಬೂತಲದಿನ್ನಿ ಮತ್ತು ಕಲ್ಲೂರು ಗ್ರಾಮಗಳ ನಡುವಿನ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿದೆ. ವಾಹನಗಳ ಸಂಚಾರಕ್ಕಾಗಿ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಮಳೆಯಿಂದ ತಿಂಗಳ ಹಿಂದೆಯಷ್ಟೇ ಕೊಚ್ಚಿ ಹೋಗಿತ್ತು. ಆಗ ಹಳ್ಳಕ್ಕೆ ರಿಂಗ್ ಹಾಕಿ, ಮೇಲೆ ಕಂಕರ್ ಮತ್ತು ಮರಂ ಹಾಕಿ ರಸ್ತೆ ನಿರ್ಮಿಸಲಾಗಿತ್ತು.
ಈಗ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದ್ದು ತಾಲೂಕಿನ ಬೂತಲದಿನ್ನಿ ಮತ್ತು ಕಲ್ಲೂರು ಗ್ರಾಮಗಳ ನಡುವಿನ ಹಳ್ಳದ ಸೇತುವೆ ನಿರ್ಮಾಣದ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿರುವ ದೃಶ್ಯ ನಿಷ್ಕಾಳಜಿ ತೋರಿಸುತ್ತಿದೆ. ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು. ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದು ನಾಗರಿಕರ ಒತ್ತಾಯಿಸಿದರು.
ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ ವರ್ಷವಾಗುತ್ತಾ ಬಂದರೂ ಇನ್ನೂ ಗುತ್ತಿಗೆದಾರರು ಪೂರ್ಣಗೊಳಿಸಿಲ್ಲ. ಇವರ ವಿರುದ್ಧ ಕ್ರಮಕೈಗೊಳ್ಳದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆ ಅಧಿಕಾರಿಗಳು ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಎರಡು ಬಾರಿ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದ್ದು, ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ತಕ್ಷಣವೇ ಗುಣಮಟ್ಟದ ತಾತ್ಕಾಲಿಕ ರಸ್ತೆ ನಿರ್ಮಿಸಬೇಕು. ಆದನಗೌಡ ಸಾಹುಕಾರ ಕಲ್ಲೂರು ನಿವಾಸಿ