

ಬೆಂಗಳೂರು: ರಾಜ್ಯದಲ್ಲಿ ಹೆಚ್ಚಳವಾಗಿರುವ ಬಿಸಿಲು ಧಗೆಗೆ ಜನತೆ ತತ್ತರಿಸಿದ್ದು, ಭಾನುವಾರ 4 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಟಿದೆ.
ಬಾಗಲಕೋಟೆ 41.2, ರಾಯಚೂರು 40.4, ಕಲಬುರಗಿ 40.9, ಬೆಂ.ಗ್ರಾಮಾಂತರ ತಾಲೂಕಿನ ಚಿಕ್ಕನಹಳ್ಳಿ 40.2 ಡಿ.ಸೆ.ಉಷ್ಣಾಂಶ ದಾಖಲಾಗಿದೆ. ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ದಾವಣಗೆರೆಯಲ್ಲಿ 40ರ ಅಸುಪಾಸಿನಲ್ಲಿ ತಾಪಮಾನ ದಾಖಲಾಗುತ್ತಿದೆ. ಚಾಮರಾಜನಗರ 38.2, ಬೀದರ್ 38, ಚಿತ್ರದುರ್ಗ 37.9, ಬೆಳಗಾವಿ 37.4, ಮಂಡ್ಯ 37.2, ಶಿವಮೊಗ್ಗ 37.2, ಚಿಂತಾಮಣಿ 36.8, ಬೆಂಗಳೂರು 36.6 ಡಿ.ಸೆ.ತಾಪಮಾನ ವರದಿಯಾಗಿದೆ. ಮೇಲಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ 2-3 ಡಿ.ಸೆ.ಅಧಿಕ ಉಷ್ಣಾಂಶ ಕಂಡುಬಂದಿದೆ.
ಮುಂದಿನ 2-3 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 3 ಡಿ.ಸೆ.ಹೆಚ್ಚಾಗಲಿದೆ. ಕಲಬುರಗಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳದಲ್ಲಿ ಹೀಟ್ ವೇವ್ ಉಂಟಾಗಲಿದೆ. ಈ ಮಧ್ಯೆಯೂ ರಾಜ್ಯದ ಕೆಲವೆಡೆ ಸಾಧಾರಣ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ.ಹಗಲು ವೇಳೆ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಭಾಗಿಯಾಗದಂತೆ ಸಾರ್ವಜನಿಕರಿಗೆ ಇಲಾಖೆ ಸಲಹೆ ಕೊಟ್ಟಿದೆ.