

ವಿಜಯವಾಣಿ ಸುದ್ದಿಜಾಲ ಬೈಂದೂರು
ಚಿಂತನೆಗಳಿಲ್ಲದ ಮನುಷ್ಯ, ಮನಸ್ಸಿಲ್ಲದ ದೇಹ ಯಾವಾಗಲೂ ನಿರ್ಜೀವ ಸ್ಥಿತಿಯಲ್ಲಿರುತ್ತದೆ. ಹಣದ ವ್ಯಾಮೋಹ ದೂರವಾದಾಗ ಸಾಹಿತ್ಯ, ನೃತ್ಯ, ಸಂಗೀತ, ನಾಟಕಗಳು ಮೌಲ್ಯವಾಗಿ ಕೊರೆಯುತ್ತಿರುತ್ತವೆ. ಇಂತಹ ಕಲಾ ಪ್ರಾಕಾರಗಳ ಮೂಲಕ ಮಕ್ಕಳಿಗೆ ಸಂಸ್ಕಾರದ ಬಗ್ಗೆ ತಿಳಿಹೇಳಬೇಕು ಎಂದು ಮಂಗಳೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಹೇಳಿದರು.
ಬೈಂದೂರಿನ ಲಾವಣ್ಯ ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ ಮಾಜಿ ಶಾಸಕ ದಿ.ಕೆ.ಲಕ್ಷ್ಮೀನಾರಾಯಣ ಸ್ಮರಣಾರ್ಥ ರಂಗಪಂಚಮಿ-2025ರ ಐದು ದಿನಗಳ ರಂಗೋತ್ಸವದ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಾವಿದರಾದ ಶಶಿಧರ ಶೆಣೈ ನಾಯ್ಕನಕಟ್ಟೆ, ಪ್ರಶಾಂತ ಮಯ್ಯ ದಾರಿಮಕ್ಕಿ ಅವರನ್ನು ಸನ್ಮಾನಿಸಲಾಯಿತು. ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ ಶುಭಾಶಂಸನೆಗೈದರು. ಸುರಭಿ ಅಧ್ಯಕ್ಷ ಆನಂದ ಮದ್ದೋಡಿ, ರೋಟರಿ ಕ್ಲಬ್ ನಿಕಟಪೂರ್ವಾಧ್ಯಕ್ಷ ಶಿರೂರು ಪ್ರಸಾದ ಪ್ರಭು, ಲೆಕ್ಕಪರಿಶೋಧಕ ಮಂಜುನಾಥ ಶೆಟ್ಟಿ ಪಿ. ಇದ್ದರು.
ಗಿರೀಶ್ ಬೈಂದೂರು ಸ್ವಾಗತಿಸಿದರು. ದಯಾನಂದ ಪಿ. ವಂದಿಸಿದರು. ಮಂಜುನಾಥ ಶಿರೂರು ನಿರೂಪಿಸಿದರು. ನಂತರ ಶ್ರೀ ನಂದಿಕೇಶ್ವರ ನಾಟಕ ಸಂಘದಿಂದ ಮುದುಕನ ಮದುವೆ ನಾಟಕ ಪ್ರದರ್ಶನಗೊಂಡಿತು.
ಲಾವಣ್ಯಕ್ಕೆ ಜನಾಶ್ರಯವೇ ಬೆನ್ನೆಲುಬು. ರಂಗಾಸಕ್ತ ಸಹೃದಯಿ ಕಲಾಭಿಮಾನಿಗಳು ಕೈಹಿಡಿದು ಮುನ್ನಡೆಸಿದ ಪರಿಣಾಮ ಈ ನಲವತ್ತೆಂಟು ವಸಂತಗಳಲ್ಲಿ ಲವಲವಿಕೆಯಿಂದಲೇ ಬೆಳೆದುಬಂದಿದೆ. ಲಾವಣ್ಯ ಒಳ ಹೊರಗೆ ತನ್ನದೇ ಆದ ಉತ್ಸಾಹಿ ಸಮುದಾಯ ಕಟ್ಟಿಕೊಂಡಿದೆ.
ನಾಗರಾಜ ಶೆಟ್ಟಿ, ಪ್ರಾಂಶುಪಾಲರು, ಬೈಂದೂರು ಸ.ಪ್ರ.ದ.ಕಾಲೇಜು