

ಗಂಗೊಳ್ಳಿ: ಶಾಲೆಯಲ್ಲಿ ತಂದೆ ತಾಯಿಯ ಅನುಪಸ್ಥಿತಿಯನ್ನು ಭರ್ತಿ ಮಾಡಿ, ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಅವರಿಗೆ ಜ್ಞಾನಾರ್ಜನೆ ಮಾಡುವ ಶಿಕ್ಷಕ-ಶಿಕ್ಷಕಿಯರು ಪ್ರಾತಃ ಸ್ಮರಣೀಯರು. ಪ್ರತಿಭೆ ಎಲ್ಲ ಮಕ್ಕಳಲ್ಲೂ ಇರುತ್ತದೆ. ಅದನ್ನು ಗುರುತಿಸಿ, ಪೋಷಿಸಬೇಕು ಎಂದು ಕುಂದಾಪುರದ ವಕೀಲ ರವಿಕಿರಣ್ ಮುರ್ಡೇಶ್ವರ ಹೇಳಿದರು.
ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ದೇವಸ್ಥಾನ ವಠಾರದಲ್ಲಿ ಗುರುವಾರ ಸಂಜೆ ಜರುಗಿದ ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 75ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಧನೆಗೈದ ವಿದ್ಯಾರ್ಥಿಗಳು ಮೇಲ್ಪಂಕ್ತಿ ಆಗಬೇಕು. ಆಧುನಿಕ ಸೌಕರ್ಯ ಒಳಪಡಿಸಿಕೊಂಡು ಓದಬೇಕಾಗಿದೆ. ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದಿನ ತ್ಯಾಗದ ಕಥೆಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕಾರ್ಯ ನಡೆಯಬೇಕು. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಹಸ್ತ ಚಾಚಿದ ದಿ.ಕೊಂಚಾಡಿ ಗಣಪತಿ ಶೆಣೈ ಅವರ ಕುಟುಂಬಸ್ಥರ ಹೃದಯವಂತಿಕೆಗೆ ಎಷ್ಟು ಶ್ಲಾಘಿಸಿದರೂ ಕಡಿಮೆ. ಅವರ ತ್ಯಾಗ, ಕೊಡುಗೆ, ವಿದ್ಯೆಯ ಬಗ್ಗೆ ಅವರಿಗಿದ್ದ ಕಳಕಳಿ ಇತರರಿಗೆ ಮಾದರಿಯಾಗಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸ್ಥಳದಾನಿ ನಾಗಪ್ಪ ಕಾನೋಜಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಂದಾಪುರ ವಲಯ ಅಧ್ಯಕ್ಷ ಗಣೇಶ ಕುಮಾರ್ ಶೆಟ್ಟಿ, ಕುಂದಾಪುರ ವಲಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂತೋಷ ಕುಮಾರ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕರ ಸಂಘ ಜಿಲ್ಲಾ ಅಧ್ಯಕ್ಷೆ ಫಿಲೋಮಿನಾ ಫರ್ನಾಂಡಿಸ್ ಶುಭಾಶಂಸನೆಗೈದರು. ಶಾಲೆ ಹಳೇ ವಿದ್ಯಾರ್ಥಿ ರಾಮ ಪ್ರಸಾದ್ ಸ್ವಸ್ತಿವಾಚನಗೈದರು. ಸ್ಥಳದಾನಿಗಳಾದ ನಾಗಪ್ಪ ಕಾನೋಜಿ, ಅಶೋಕ್ ಕಾನೋಜಿ ಅವರನ್ನು ಸನ್ಮಾನಿಸಲಾಯಿತು. ಶಾಲೆ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನ ಅಧ್ಯಕ್ಷ ಶಂಕರ ಖಾರ್ವಿ, ಗಂಗೊಳ್ಳಿ ಉದ್ಯಮಿ ಮಂಜುನಾಥ ಮಡಿವಾಳ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ದಿವಾಕರ ಖಾರ್ವಿ, ಗೌರವಾಧ್ಯಕ್ಷ ಸುರೇಶ ಕರ್ಣಿಕ್, ಕಾರ್ಯದರ್ಶಿ ನಾಗರಾಜ ಖಾರ್ವಿ ಕೊಲ್ಲೂರು, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಲಕ್ಷ್ಮಣ ಖಾರ್ವಿ, ವಿದ್ಯಾರ್ಥಿ ನಾಯಕಿ ಅಂಜನಾ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ರವಿಶಂಕರ ಖಾರ್ವಿ ಸ್ವಾಗತಿಸಿದರು. ಶಾಲೆ ಪ್ರಭಾರ ಮುಖ್ಯಶಿಕ್ಷಕಿ ಯಶೋಧಾ ವರದಿ ವಾಚಿಸಿದರು. ಸಹಶಿಕ್ಷಕಿ ಅನುಷಾ ಸಿ.ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.