

ಬೆಳಗಾವಿ: ಉತ್ತರಕರ್ನಾಟಕದ ಮಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಹಿಸುದ್ದಿ ನೀಡಿದ್ದಾರೆ. ಅರ್ಥಾತ್, ಸುವರ್ಣ ಸೌಧವನ್ನು ಆಡಳಿತದ ಶಕ್ತಿಕೇಂದ್ರ ಮಾಡುವುದಾಗಿ ಭರವಸೆ ನೀಡಿರುವ ಅವರು, ಸಕ್ಕರೆ ಆಯುಕ್ತರ ಕಚೇರಿ ಸೇರಿ ಮಹತ್ವದ ಕಚೇರಿಗಳನ್ನು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಇಂದು ಅಧಿಕಾರಿಗಳ ಸಭೆ ಕರೆದ ಬಳಿಕದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಸುವರ್ಣ ವಿಧಾನಸೌಧವನ್ನು ಆಡಳಿತದ ಶಕ್ತಿಕೇಂದ್ರ ಆಗಿಸಲು ಬದ್ಧರಿದ್ದೇವೆ. ಡಿಸೆಂಬರ್ನಲ್ಲಿ ಚಳಿಗಾಲದ ಅಧಿವೇಶನವನ್ನೂ ನಡೆಸಲಿದ್ದೇವೆ ಎಂದ ಅವರು ಸಕ್ಕರೆ ಆಯುಕ್ತಾಲಯ ಬೆಳಗಾವಿಗೆ ಸ್ಥಳಾಂತರಿಸಲು ಆದೇಶ ನೀಡಲಾಗುವುದು ಎಂದರು.
ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತು ಮಾತನಾಡಿದ ಅವರು, ಅದಕ್ಕಾಗಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಗಡಿಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಆಸ್ಪತ್ರೆ, ಆಕ್ಸಿಜನ್, ಔಷಧ ಮತ್ತಿತರ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು. ಬೆಳಗಾವಿ ಪಾಸಿಟಿವಿಟಿ ದರ ಕಡಿಮೆಯಾಗಿದೆ. ಗೋಕಾಕ, ಚಿಕ್ಕೋಡಿ, ಸವದತ್ತಿ, ಬೆಳಗಾವಿ ಮತ್ತಿತರೆಡೆ ಸೇರಿ ಒಟ್ಟು ಹತ್ತು ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಇಪ್ಪತ್ತು ದಿನಗಳಲ್ಲಿ ಎಲ್ಲ ಆಕ್ಸಿಜನ್ ಘಟಕಗಳನ್ನೂ ಸಿದ್ಧಪಡಿಸಲಾಗುವುದು ಎಂದು ಸಿಎಂ ತಿಳಿಸಿದರು.