

ಬೆಂಗಳೂರು: ಕಳ್ಳನೊಬ್ಬ ಸರಗಳವು ಮಾಡಿಕೊಂಡು ಪರಾರಿ ಆಗಬೇಕು ಎನ್ನುವಷ್ಟರಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಅವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾತ್ರವಲ್ಲ, ಒಂದು ಕಳ್ಳತನದಲ್ಲಿ ಸಿಕ್ಕಿಹಾಕಿಕೊಂಡ ಈತನ ಇತರ ಕಳವು ಪ್ರಕರಣಗಳೂ ಬೆಳಕಿಗೆ ಬಂದಿವೆ.
ಚಾಮರಾಜಪೇಟೆ ಪ್ರದೇಶದಲ್ಲಿ ಕಳವು ಮಾಡಿದ್ದ ಈತ ಇನ್ನೇನು ತಪ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಸಾರ್ವಜನಿಕರಿಂದ ಈತನನ್ನು ವಶಕ್ಕೆ ಪಡೆದುಕೊಂಡ ಚಾಮರಾಜಪೇಟೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಒಂದು ವಿಜಯನಗರ, ಕಾಟನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿಚಕ್ರವಾಹನ ಹಾಗೂ ಇನ್ನೆರಡು ಸರಗಳವು ಪ್ರಕರಣಗಳು ಬಯಲಾಗಿವೆ.
ಬಂಧಿತನಿಂದ 2 ಲಕ್ಷ ರೂಪಾಯಿ ಮೌಲ್ಯದ ಎರಡು ಚಿನ್ನದ ಸರ, ಎರಡು ದ್ವಿಚಕ್ರ ವಾಹನ, ಹಾಗೂ 220 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಕಳ್ಳ ನಂಬರ್ ಪ್ಲೇಟ್ ಇರದ ಬೈಕ್ನಲ್ಲಿ ಬಂದು ಸರ ಕಸಿದುಕೊಂಡು ಪರಾರಿ ಆಗುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಬಂದು ಸರ ಕಸಿದು ಪರಾರಿಯಾಗುತ್ತಿದ್ದ ಆರೋಪಿ. ಆರೋಪಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.