More

    ಕೊನೇ ದಿನ ನಾಮಪತ್ರಗಳ ಸುರಿಮಳೆ

    ಮೈಸೂರು: ವಿಧಾನಪರಿಷತ್‌ನ ಮೂರು ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ 20 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.


    ದಕ್ಷಿಣ ಶಿಕ್ಷಕರ ಕ್ಷೇತ್ರ:

    ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆ ವ್ಯಾಪ್ತಿಯ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ವಿವೇಕಾನಂದ ನಾಮಪತ್ರ ಸಲ್ಲಿಸಿದರು. ನಾಟಕೀಯ ಬೆಳವಣಿಗೆ ನಡೆದ ಕಾರಣಕ್ಕೆ ಜೆಡಿಎಸ್ ಟಿಕೆಟ್ ವಂಚಿತ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ನಾಮಪತ್ರ ಸಲ್ಲಿಸಲಿಲ್ಲ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿಯಾಗಿ 75 ವರ್ಷದ ವಾಟಾಳ್ ನಾಗರಾಜ್, ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಎಂಎಲ್‌ಸಿ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಬೋಗಾದಿಯ ನಾಗಮಲ್ಲೇಶ್, ಕುವೆಂಪುನಗರದ ಡಾ.ಎಸ್.ಅನಿಲ್‌ಕುಮಾರ್, ಚಾಮರಾಜನಗರದ ಬಂಡಿಗೆರೆ ಗ್ರಾಮದ ಆರ್.ಮಹೇಶ್, ಇದೇ ತಾಲೂಕಿನ ದೊಡ್ಡರಾಯನಪೇಟೆಯ ಎನ್.ಅಂಬರೀಶ್, ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರದ ಕೆ.ರಾಜು, ಎಸ್.ನಿಂಗರಾಜು ನಾಮಪತ್ರ ಸಲ್ಲಿಸಿದರು.


    ನೈಋತ್ಯ ಪದವೀಧರರ ಕ್ಷೇತ್ರ:


    ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ದಾವಣಗೆರೆ ಜಿಲ್ಲಾ ವ್ಯಾಪ್ತಿಯ ನೈಋತ್ಯ ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಧನಂಜಯ್ ಸರ್ಜಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಬಿಜೆಪಿ ವಿರುದ್ಧ ಬಂಡೆದ್ದಿರುವ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಅಲ್ಲಿಸಿದರು.
    ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗದ ಷಹರಾಜ್ ಮಜಾಹಿದ್ ಸಿದ್ದಕ್ಕಿ, ಜಿ.ಆರ್.ಷಡಾಕ್ಷರಪ್ಪ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜಿ.ಸಿ.ಪಟೇಲ್, ಬೆಂಗಳೂರು ವಿಜಯನಗರದ ಎಂ.ರಂಗಸ್ವಾಮಿ ಸಹ ನಾಮಪತ್ರ ಸಲ್ಲಿಸಿದವರು.


    ನೈಋತ್ಯ ಶಿಕ್ಷಕರ ಕ್ಷೇತ್ರ:


    ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಶಾಲನಗರದ ಕೆ.ಕೆ.ಮಂಜುನಾಥ್‌ಕುಮಾರ್, ಪಕ್ಷೇತರ ಅಭ್ಯರ್ಥಿಯಾಗಿ ಚಿಕ್ಕಮಗಳೂರಿನ ಬಿ.ಆರ್.ನಂಜೇಶ್, ಇದೇ ಜಿಲ್ಲೆಯ ಹಿರೇಕೊಳಲೆಯ ಕೆ.ಕೆ.ಮಂಜುನಾಥ್, ಉಡುಪಿಯ ಶಿವಳ್ಳಿಯ ನರೇಶ್ ಹೆಗ್ಗಡೆ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿರುವ ಮೈಸೂರು ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಅವರು ನಾಮಪತ್ರಗಳನ್ನು ಸ್ವೀಕರಿಸಿದರು.


    ಹಾಜರಿದ್ದ ನಾಯಕರು:


    ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಎಂಎಲ್ಸಿ ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ಸಾ.ರಾ.ಮಹೇಶ್, ಶಾಸಕರಾದ ಜಿ.ಟಿ.ದೇವೇಗೌಡ, ಶಾಸಕ ಟಿ.ಎಸ್.ಶ್ರೀವತ್ಸ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇತರರಿದ್ದರು.


    ಕಾಂಗ್ರೆಸ್ ಅಭ್ಯರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಸೇರಿದಂತೆ ಪಕ್ಷದ ಮುಖಂಡರು ಸಾಥ್ ನೀಡಿದರು.

    ಬಿಗಿ ಭದ್ರತೆ:
    ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಪ್ರಾದೇಶಿಕ ಕಚೇರಿ ಎದುರು ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು. ವಿವಿಧ ಜಿಲ್ಲೆಗಳಿಂದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಕಚೇರಿ ಎದುರು ಜಮಾವಣೆಗೊಂಡಿದ್ದರು.

    ಮೇ 20ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಬಳಿಕ ಚುನಾವಣಾ ಕಣದ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಜೂ. 3ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನದ ನಡೆಯಲಿದೆ. ಜೂ.6ರಂದು ಮತ ಎಣಿಕೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts