

| ರಾಯಣ್ಣ ಆರ್.ಸಿ. ಬೆಳಗಾವಿ
ಸ್ನೇಹ ಜೀವಿ, ಅಜಾತಶತ್ರು ದಿ.ಸುರೇಶ ಅಂಗಡಿ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅಲ್ಲದೆ ರೈಲ್ವೆ ರಾಜ್ಯ ಸಚಿವರಾಗಿ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿವೃದ್ಧಿ ಕಾರ್ಯಗಳ ಮೂಲಕ ಜನ-ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಸುರೇಶ ಅಂಗಡಿ ನಮ್ಮನ್ನಗಲಿ ಒಂದು ವರ್ಷವಾಯಿತು. ಅವರ ಸವಿನೆನಪಿಗಾಗಿ ಸುರೇಶ ಅಂಗಡಿ ಎಜುಕೇಷನ್ ಫೌಂಡೇಷನ್ ಕಾಲೇಜಿನ ಆವರಣದಲ್ಲಿ ಭಾನುವಾರ ಬೆಳಗ್ಗೆ 10:30ಕ್ಕೆ ದಿ.ಸುರೇಶ ಅಂಗಡಿ ಅವರ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಹಾಗೂ ಸಚಿವರಾದ ಉಮೇಶ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇರಿ ಜಿಲ್ಲೆಯ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಅಭಿವೃದ್ಧಿಯ ಹರಿಕಾರ: ಕಳೆದ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗಕ್ಕೆ ಮಂಜೂರಾತಿ ಕೊಡಿಸಿದ್ದರು. ಅಲ್ಲದೆ, 988 ಕೋಟಿ ರೂ. ಅನುದಾನ ಬಿಡುಗಡೆಗೆ ಅನುಮೋದನೆ ಕೊಡಿಸಿದ್ದರು. ಸುರೇಶ ಅಂಗಡಿ ಅವರು ರೈಲ್ವೆ ರಾಜ್ಯ ಸಚಿವರಾದ ತಿಂಗಳ ಒಳಗಾಗಿಯೇ ಬೆಳಗಾವಿ-ಬೆಂಗಳೂರು ಏಕ್ಸ್ಪ್ರೆಸ್ ವಿಶೇಷ ರೈಲು ಪ್ರಾರಂಭಿಸಿದ್ದು, ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಈ ರೈಲಿಗೆ ಉತ್ತರ ಕರ್ನಾಟಕದ ಪ್ರಯಾಣಿಕರಿಂದ ತುಂಬ ಪ್ರಶಂಸೆ ವ್ಯಕ್ತವಾಗಿದೆ. ಮಿರಜ್-ಲೋಂಡಾ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ಜೋಡುಮಾರ್ಗ ನಿರ್ವಣಕ್ಕಾಗಿ ಮತ್ತು ವಿದ್ಯುದೀಕರಣಕ್ಕಾಗಿ 3,300 ಕೋಟಿ ರೂ.ಗಳಿಗೂ ಅಧಿಕ ಅನುದಾನವನ್ನು ಕೇಂದ್ರ ಸರ್ಕಾರದಿಂದ ಮಂಜೂರಾತಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.
ಅಂತಾರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣ: ಬೆಂಗಳೂರಿನ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿರುವ ಬೈಯಪ್ಪನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣ ನಿರ್ಮಾಣ ಮಾಡಲು ಸಚಿವ ಸುರೇಶ ಅಂಗಡಿ ಕನಸು ಕಂಡಿದ್ದರು. ಅಲ್ಲದೆ, ಬೆಂಗಳೂರು ನಗರದ ಜನತೆಯ ಬಹುದಿನದ ಬೇಡಿಕೆಗಳಲ್ಲಿ ಒಂದಾಗಿದ್ದ ಸಬರ್ಬನ್ ರೈಲು ಮಾರ್ಗ ಅಭಿವೃದ್ಧಿ ಪಡಿಸಬೇಕು ಎಂಬ ಮಹದಾಸೆಯಿಂದ ಈ ಯೋಜನೆಗೆ ಆದ್ಯತೆ ನೀಡಿದ್ದರು. ಹೆಚ್ಚುತ್ತಿರುವ ಸಂಚಾರ ದಟ್ಟಣೆ ಕಡಿಮೆ ಮಾಡಲು ಅನುಕೂಲವಾಗಲಿದೆ ಎಂಬ ಬೇಡಿಕೆ ಹಿನ್ನೆಲೆಯಲ್ಲಿ 18 ಸಾವಿರ ಕೋಟಿ ರೂ. ಅನುದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ವಾರಾಣಸಿ- ಉಜ್ಜಯನಿ ರೈಲು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರವಾಗಿರುವ ವಾರಾಣಸಿಯಿಂದ ಉಜ್ಜಯನಿಗೆ ಹೋಗಿ ಬರುವ ಪ್ರವಾಸಿಗರಿಗೆ ಮತ್ತು ಭಕ್ತಾದಿಗಳಿಗೆ ಅನುಕೂಲತೆ ಕಲ್ಪಿಸಲು ಈ ಮಾರ್ಗದಲ್ಲಿ ಹೊಸದಾಗಿ ರೈಲು ಪ್ರಾರಂಭಿಸಿದ್ದರು.
ಅಭಿವೃದ್ಧಿಯಲ್ಲಿ ಐತಿಹಾಸಿಕ ಕಾರ್ಯ!: ಐತಿಹಾಸಿಕ ಬೆಳಗಾವಿ ರೈಲು ನಿಲ್ದಾಣವನ್ನು ಅತ್ಯಾಧುನಿಕ ವಾಗಿ ಅಭಿವೃದ್ಧಿ ಪಡಿಸುವುದಕ್ಕಾಗಿ 200 ಕೋಟಿ ರೂ. ಅನುದಾನ ತಂದಿದ್ದರು. ಜತೆಗೆ ಹುಬ್ಬಳ್ಳಿ ರೈಲ್ವು ನಿಲ್ದಾಣಕ್ಕೆ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣ’ ಎಂದು ನಾಮಕರಣ ಮಾಡಿಸಿದ್ದರು. 20 ವರ್ಷಗಳಿಂದ ಅರ್ಧಕ್ಕೆ ನಿಂತಿದ್ದ ಕುಡಚಿ-ಬಾಗಲಕೋಟೆ ರೈಲು ಮಾರ್ಗ ಕಾಮಗಾರಿ ಪೂರ್ಣ ಗೊಳಿಸಲು ವೇಗ ನೀಡಿದ್ದರು. ಶಿಕಾರಿಪುರ, ರಾಣೆಬೆನ್ನೂರ ನಡುವೆ ಹೊಸ ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು.
ದೇಶದಲ್ಲಿಯೇ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿರುವ ತಿರುಪತಿ ರೈಲು ನಿಲ್ದಾಣವನ್ನು ಅತ್ಯಂತ ಸುಂದರ ಹಾಗೂ ಅತ್ಯಾಧುನಿಕ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದಕ್ಕೆ 400 ಕೋಟಿ ರೂ. ಅನುದಾನ ಕೊಡಿಸುವಲ್ಲಿ ಸುರೇಶ ಅಂಗಡಿ ಯಶಸ್ವಿಯಾಗಿದ್ದರು. ಜತೆಗೆ ಬೆಳಗಾವಿಗೆ ಸ್ಮಾರ್ಟ್ ಸಿಟಿ ಯೋಜನೆ, ಅಮೃತ ಸಿಟಿ ಯೋಜನೆ ತರುವಲ್ಲಿಯೂ ಅಂಗಡಿ ಶಕ್ತಿ ಮೀರಿ ಪ್ರಯತ್ನಿಸಿದ್ದರು. ರಾಜ್ಯಸಭೆ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಮತ್ತು ಸುರೇಶ ಅಂಗಡಿ, ಉಡಾನ್ ಯೋಜನೆಯಲ್ಲಿ 14 ನಗರಗಳಿಗೆ ಬೆಳಗಾವಿಯಿಂದ ನೇರ ವಿಮಾನ ಸೇವೆ ಪ್ರಾರಂಭಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆ ಅನುಷ್ಠಾನಗೊಳಿಸಿದ್ದರು. ಈಗ ಸಹಸ್ರಾರು ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಿದೆ.