

ಬೆಂಗಳೂರು: ಬಿಸಿಲಿನ ತಾಪಕ್ಕೆ ರಾಜ್ಯದಲ್ಲಿ ಬಿಯರ್ಗೆ ಹೆಚ್ಚು ಬೇಡಿಕೆ ಬಂದಿದೆ. ದಿನದಿಂದ ದಿನಕ್ಕೆ ಬಿಯರ್ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
2024ರ ಏ.1ರಿಂದ ಏ.16ರವರೆಗೆ ರಾಜ್ಯಾದ್ಯಂತ 26.62 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. 2023ರ ಏ.1ರಿಂದ ಏ.16ರವರೆಗೆ 18.33 ಲಕ್ಷ ಬಾಕ್ಸ್ ಮಾರಾಟವಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ 8.29 ಲಕ್ಷ ಬಾಕ್ಸ್ ಬಿಯರ್ ಅಧಿಕ ಮಾರಾಟವಾಗಿದ್ದು, ಶೇ.48ರಷ್ಟು ಬೆಳವಣಿಗೆಯಾಗಿದೆ.
ಐದು ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ,ಬಜೆಟ್ನಲ್ಲಿ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್), ಬಿಯರ್ ಮೇಲಿನ ಅಬಕಾರಿ ಸುಂಕ ಪರಿಷ್ಕರಿಸಿ ಮದ್ಯವ್ಯಸನಿಗಳಿಗೆ ಬೆಲೆ ಏರಿಕೆ ಶಾಕ್ ಕೊಟ್ಟಿತ್ತು. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್ನಲ್ಲಿಯೂ ಸಿಎಂ ಸಿದ್ದರಾಮಯ್ಯ, ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಶುಂಕ ಹೆಚ್ಚಿಸಿದ್ದರು. ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಬಾಟಲ್ ಮೇಲೆ ಹೆಚ್ಚವರಿ ಅಬಕಾರಿ ಸುಂಕವನ್ನು ಶೇ.10 ಹೆಚ್ಚಿಸಲಾಗಿತ್ತು. ಈ ಬಗ್ಗೆ ಇಲಾಖೆ, ಬಿಯರ್ ದರ ಹೆಚ್ಚಿಸಿ ಕರ್ನಾಟಕ ಅಬಕಾರಿ (ಸುಂಕಗಳ ಮತ್ತು ಶುಲ್ಕಗಳು) ನಿಯಮಕ್ಕೆ ತಿದ್ದುಪಡಿ 2024ರ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ನಿರಂತರವಾಗಿ ಬಿಯರ್ ದರ ಹೆಚ್ಚಳವಾದರೂ ರಾಜ್ಯದಲ್ಲಿ ಬಿಯರ್ ಸೇವನೆ ಕಡಿಮೆಯಾಗಿಲ್ಲ. ಬದಲಾಗಿ ಮೊದಲಿಗಿಂತ ಹೆಚ್ಚಾಗಿ ಬಿಯರ್ ಖರೀದಿಸಿ ಕುಡಿಯುತ್ತಿದ್ದಾರೆ.
ಮೇವರೆಗೂ ಬಿಯರ್ಗೆ ಡಿಮ್ಯಾಂಡ್
ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಮದ್ಯ ಎತ್ತುವಳಿ ನಿಯಂತ್ರಿಸುವ ಸಂಬಂಧ ಅಬಕಾರಿ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಮದ್ಯ ಮಾರಾಟಗಾರರು ಸರಾಸರಿ ಎತ್ತುವಳಿ ಶೇ.20ಗಿಂತ ಹೆಚ್ಚು ಮದ್ಯ, ಬಿಯರ್ ದಾಸ್ತಾನನ್ನು ಎತ್ತುವಳಿ ಮಾಡಬಾರದು. ವೆಬ್ ಇಂಡೆಂಟಿಂಗ್ನಲ್ಲಿ ಮಿತಿ ಅಳವಡಿಸುವಂತೆ ಮಾರಾಟಗಾರರಿಗೆ ಇಲಾಖೆ ಸೂಚಿಸಿದೆ. ಆದರೆ, ಮೇ ತಿಂಗಳವರೆಗೆ ಬಿಯರ್ಗೆ ಬಿಯರ್ ಇನ್ನಷ್ಟು ಬೇಡಿಕೆ ಬರಲಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂ.ಆದಾಯ ಹರಿದು ಬರಲಿದೆ. ಆದರೆ, ದಿನದಿಂದ ದಿನಕ್ಕೆ ಬಿಯರ್ ಬೇಡಿಕೆ ಬರುತ್ತಿದ್ದರೂ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಬೇಡಿಕೆ ತಕ್ಕಂತೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ವ್ಯತ್ಯಯವಾಗುತ್ತಿದೆ ಎಂದು ಮಾಲೀಕರು ಹೇಳುತ್ತಾರೆ.