

ಚಿಕ್ಕಬಳ್ಳಾಪುರ: ಹೆಚ್ಚು ಸಮಯ ಮೊಬೈಲ್ ಬಳಸುವ ಬದಲು ವಿದ್ಯಾಭ್ಯಾಸದತ್ತ ಗಮನ ಹರಿಸು ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ಒಂಬತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿ ನಡೆದಿದೆ.
ಗೌರಿಬಿದನೂರು ತಾಲ್ಲೂಕಿನ ಚಿತ್ತವಾಳಹಳ್ಳಿ ಗ್ರಾಮದ ನಿವಾಸಿ ಲೋಕೇಷ್ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ವೃತ್ತಿಯಲ್ಲಿ ರೈತರಾಗಿರುವ ಲೋಕೇಶ್ ತಂದೆ ಹೆಚ್ಚು ಫೋನ್ ಬಳಸದಂತೆ ತಮ್ಮ ಮಗನಿಗೆ ತಾಕೀತು ಮಾಡಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಭಾನುವಾರ ಮಧ್ಯಾಹ್ನ ಲೋಕೇಶ್ ಪೋಷಕರು ಹೆಚ್ಚು ಸಮಯ ಮೊಬೈಲ್ ಬಳಸುವ ಬದಲು ವಿದ್ಯಾಭ್ಯಾಸದತ್ತ ಗಮನ ಹರಿಸು ಎಂದು ಬುದ್ದಿವಾದ ಹೇಳಿದ್ದಾರೆ. ಇದರಿಂದ ಮನನೊಂದ ಲೋಕೇಶ್ ತನ್ನ ಪೋಷಕರೊಂದಿಗೆ ಜಗಳವಾಡಿ ಮನೆಯಿಂದ ಹೊರಬಂದಿದ್ದಾನೆ. ಬಳಿಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.