

ಬೆಂಗಳೂರು:ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅವರ ಅಧ್ಯಯನ ಪೀಠ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ‘ ಕಾಯಕ ಶರಣರ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೋಷಿತ ಸಮುದಾದದ ಬೇಡಿಕೆಯಂತೆ ಐವರ ಕಾಯಕ ಶರಣರ ಅಧ್ಯಯನ ಪೀಠ ಸ್ಥಾಪಿಸಲು ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹನೀಯರ ಸಮಗ್ರ ಮಾಹಿತಿ ಹಾಗೂ ಅವರ ಬಗ್ಗೆ ಅಧ್ಯಯನ ಆಗಬೇಕಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುವುದು. ತುಳಿತಕ್ಕೆ ಒಳಗಾದ ಸಮುದಾಯದವರು ಶಿಕ್ಷಣವಂತರಾಗಬೇಕು. ಪ್ರತಿ ಹಳ್ಳಿಯಲ್ಲಿ ದೇವಾಲಯ ಗಂಟೆಗಿಂತ ಹೆಚ್ಚು ಶಿಕ್ಷಣದ ಗಂಟೆಯನ್ನು ಬಾರಿಸುವಂತಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಮುನ್ನಡೆಯೋಣ. ಹೆಚ್ಚು ಶಿಕ್ಷಿತರಾಗುವ ಸಮಾಜ ಅಭಿವೃದ್ಧಿ ಹೊಂದಲಿದೆ. ಶೋಷಿತ ಸಮುದಾಯ ಬರೀ ಸರ್ಕಾರದ ‘ಸಿ’ಮತ್ತು ‘ಡಿ’ಗ್ರೂಪ್ ಹುದ್ದೆ ಪಡೆಯುವುದಲ್ಲ.ಐಎಎಸ್, ಐಪಿಎಸ್ ಹುದ್ದೆಗಳನ್ನು ಪಡೆಯುವಂತಾಗಬೇಕು ಎಂದರು. ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಹಾಸಂಸ್ಥಾನ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಮಹಾ ಶಿವಶರಣ ಹರಳಯ್ಯ ಗುರಪೀಠದ ಶ್ರೀ ಬಸವಹರಳಯ್ಯ ಸ್ವಾಮೀಜಿ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕ ತಿಮ್ಮರಾಯಪ್ಪ, ಇಲಾಖೆ ಕಾರ್ಯದರ್ಶಿ ಡಾ. ಎನ್.ಮಂಜುಳಾ ಮತ್ತಿತರರಿದ್ದರು.
ಬಾಬು ಜಗಜೀವನ್ ರಾಮ್ಗೆ ಭಾರತ ರತ್ನ ಸಿಗಲಿ:
ಬಾಬು ಜಗಜೀವನ್ ರಾಮ್ ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗುವಂತಾಗಬೇಕು. ಈ ಬಗ್ಗೆ ಸಿಎಂ ಅವರ ಗಮನಕ್ಕೆ ತಂದು ಕೇಂದ್ರಕ್ಕೆ ಪತ್ರ ಬರೆಯಲಾಗುವುದು. ಬೇರೆ ಸಮುದಾಯದ ಮುಂದುವರಿದಿದೆ. ನಾವೆಲ್ಲರೂ ಇನ್ನೂ ಹೆಜ್ಜೆ ಹಾಕುತ್ತಿದ್ದೇವೆ. ಎಸ್ಸಿ ಮತ್ತು ಎಸ್ಟಿ ಸಮುದಾಯದವರಿಗೆ ಬಜೆಟ್‌ನಲ್ಲಿ ಶೇ.24 ಹಣ ಮೀಸಲಿಟ್ಟ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಶೋಷಿತ ವರ್ಗದವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಸಿಎಂ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಅವರು ಮಾತ್ರ. ಕಾಂತರಾಜು ವರದಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಿವರಾ ತಂಗಡಗಿ ತಿಳಿಸಿದರು.