ಶ್ರೀನಿವಾಸ ಕಲ್ಯಾಣೋತ್ಸವ ಸಂಭ್ರಮ: ಧನ್ಯತೆ ಮೆರೆದ ಸಾವಿರಾರು ಭಕ್ತರು

srinivasa
Published on

ಬೆಂಗಳೂರು: ಗೆಲುವು ಕನ್ನಡ ಗೆಳೆಯರ ಸಮಿತಿ ಹಾಗೂ ಜಿಕೆಜಿಎಸ್​ ಚಾರಿಟಬಲ್​ ಟ್ರಸ್ಟ್​, ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಶಂಕರ್​ನಾಗ್​ ಸರ್ಕಲ್​ನ ಕೆಂಪೇಗೌಡ ಆಟದ ಮೈದಾನದಲ್ಲಿ ಆಯೋಜಿಸಿರುವ 4 ದಿನಗಳ "ಕರುನಾಡ ಸಂಭ್ರಮ' ಕಾರ್ಯಕ್ರಮದ 2ನೇ ದಿನವಾದ ಶುಕ್ರವಾರ ಶ್ರೀನಿವಾಸ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು.

ಮೈದಾನದಲ್ಲಿ ತಾತ್ಕಾಲಿಕವಾಗಿ ಶ್ರೀವೆಂಕಟೇಶ್ವರ ಮೂರ್ತಿ ಪ್ರತಿಷ್ಠಾಪಿಸಿರುವ ದೇವಸ್ಥಾನದಲ್ಲಿ ಶ್ರೀನಿಧಿ ಕಮಲೇಶ್​ ಶಾಸ್ತ್ರಿ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ಸುತ್ತಮುತ್ತ ಬಡಾವಣೆಯ ಸಾವಿರಾರು ಭಕ್ತಾದಿಗಳು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು. ಮನುಷ್ಯನ ವಿವಾಹಕ್ಕೆ ಸಂಬಂಧಿಸಿದ ಕಾಶಿಯಾತ್ರೆ&ಪಾದಪೂಜೆ, ಜಿರಿಗೆ ಬೆಲ್ಲ ಶಾಸ್ತ್ರ, ಅಕ್ಷತಾರೋಪಣ, ಪುಣ್ಯ ಪ್ರಾಪ್ತಿಗಾಗಿ ಧಾರೆ, ವಿಶ್ವ ಕಲ್ಯಾಣಕ್ಕಾಗಿ ಮಾಂಗಲ್ಯಧಾರಣೆ, ಮಾನವ ಜನಾಂಗದ ಅನೋನ್ಯತೆಗಾಗಿ ವಾಜ ಹೋಮ, ಫಲ ಪೂಜೆ, ಅಷ್ಟವಧನ ಸೇವೆಯನ್ನು ಅಲಂಕೃತ ಉತ್ಸವ ಮೂರ್ತಿಗಳಿಗೆ ಸಲ್ಲಿಸಲಾಯಿತು. ಇದೇ ವೇಳೆ ಹನುಮಾನ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇದಕ್ಕೂ ಮುನ್ನ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತರಲಾಯಿತು.

ಮಾಧವತೀರ್ಥ ಮಠದ ಪೀಠಾಧಿಪತಿ ಶ್ರೀ ವಿದ್ಯಾಸಾಗರ ಮಾಧವ ತೀರ್ಥರು, ಉತ್ತರಾಧಿಕಾರಿ ಶ್ರೀ ವಿದ್ಯಾವಲ್ಲಭ ಮಾಧವ ತೀರ್ಥರು, ಟ್ರಸ್ಟ್​ನ ಗೌರವಾಧ್ಯಕ್ಷ ಡಿ. ಶಿವಲಿಂಗಯ್ಯ, ಅಧ್ಯಕ್ಷ ಡಿ. ಕೃಷ್ಣೇಗೌಡ, ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಪ್ರಶಾಂತ್​, ಮುಖ್ಯ ಕಾರ್ಯದರ್ಶಿ ವಿ. ಮಂಜುನಾಥ್​, ನಟ ತಬಲಾನಾಣಿ ಮತ್ತಿತರರಿದ್ದರು.

ಲಕ್ಷ್ಮೀದೇವಮ್ಮಗೆ ಪ್ರಶಸ್ತಿ ಪ್ರದಾನ: ಶನಿವಾರ (ಡಿ.14) ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ನಟಿ ಲಕ್ಷ್ಮೀದೇವಮ್ಮಗೆ "ಕರುನಾಡ ಸಂಭ್ರಮ' ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬಳಿಕ ಹಿರಿಯ ಗಾಯಕಿ ಕೆ.ಎಸ್​. ಚಿತ್ರಾ ತಂಡದಿಂದ ಸಂಗೀತ ಸಂಜೆ ಮತ್ತು ಕಿರುತೆರೆ ನಟ, ನಟಿಯರು ನೃತ್ಯ ಪ್ರಚುರಪಡಿಸಲಿದ್ದಾರೆ.

ನಾಡಿನ ಒಳಿತಿಗಾಗಿ ಪ್ರತಿ ವರ್ಷ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಕಷ್ಟಗಳನ್ನು ನಿವಾರಿಸಿ ನಾಡಿಗೆ ಒಳಿತು ಮಾಡುವಂತೆ ದೇವರಲ್ಲಿ ಪ್ರಾರ್ಥಿಸಲಾಯಿತು. ತಿರುಪತಿಯಿಂದ ತಂದಿದ್ದ 2 ಸಾವಿರ ಲಡ್ಡು ಪ್ರಸಾದವನ್ನು ಭಕ್ತಾದಿಗಳಿಗೆ ನೀಡಲಾಯಿತು.

| ಡಿ.ಎನ್​. ರಮೇಶ್​. ಗೆಲುವು ಕನ್ನಡ ಗೆಳೆಯರ ಸಮಿತಿ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net