

Sri Sri Ravi Shankar : ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮಹತ್ವದ ಚಿಹ್ನೆಯಾದ, ಶಾಶ್ವತವಾಗಿ ಕಳೆದುಹೋಯಿತೆಂದು ಭಾವಿಸಲಾಗಿದ್ದ ಪವಿತ್ರವಾದ ನಿಧಿಯೊಂದು, ಇತಿಹಾಸದಲ್ಲಿ ಅಪರೂಪದ ತಿರುವು ಪಡೆದು ಈಗ ಪುನಃ ತನ್ನ ಮೂಲ ಗೂಡಿಗೆ ಮರಳುತ್ತಿದೆ. ಮಹ್ಮದ್ ಘಜ್ನಿಯು 1025ರಲ್ಲಿ ನಡೆಸಿದ ದಾಳಿಯ ವೇಳೆ ಧ್ವಂಸಗೊಂಡ ಸೋಮನಾಥ ಶಿವಲಿಂಗವನ್ನು ಸಾವಿರ ವರ್ಷಗಳ ಕಾಲ ಗುಪ್ತವಾಗಿ ಉಳಿಸಿಕೊಳ್ಳಲಾಗಿತ್ತು. ಇದೀಗ, ಈ ದೈವೀ ಅವಶೇಷಗಳನ್ನು ಪುನಃ ಪ್ರತಿಷ್ಠಾಪಿಸಿ ಅದರ ಮಹಿಮೆ ಮತ್ತು ಜನರ ಹೆಮ್ಮೆಯನ್ನು ಪುನಃ ಸ್ಥಾಪಿಸಲು ಸಿದ್ಧತೆಗಳು ನಡೆಯುತ್ತಿವೆ.
ಶಿವಲಿಂಗದ ಭಾಗಗಳನ್ನು ತಮ್ಮೊಂದಿಗೆ ದಕ್ಷಿಣಕ್ಕೆ ಒಯ್ದ, ಅಗ್ನಿಹೋತ್ರಿ ಬ್ರಾಹ್ಮಣರ ವಂಶಸ್ಥರಾಗಿರುವ ಪ್ರಸ್ತುತ ಸಂರಕ್ಷಕರು, ಸೋಮನಾಥದಲ್ಲಿ ಲಿಂಗವನ್ನು ಅದರ ಪೂರ್ಣ ವೈಭವಕ್ಕೆ ಹಿಂದಿರುಗಿಸುವ ಇತಿಹಾಸದ ಈ ಮಹತ್ವದ ಕ್ಷಣವನ್ನು ಮುನ್ನಡೆಸಲು ವಿಶ್ವಪ್ರಸಿದ್ಧ ಆಧ್ಯಾತ್ಮಿಕ ಗುರುಗಳಾಗಿರುವ ಪರಮಪೂಜ್ಯ ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರನ್ನು ಆಯ್ಕೆ ಮಾಡಿದ್ದಾರೆ.
ಸೋಮನಾಥ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಮತ್ತು ಹಲವಾರು ಬಾರಿ ಧ್ವಂಸಗೊಂಡು, ಪುನಃ ನಿರ್ಮಾಣಗೊಂಡಿದೆ. 1025ರಲ್ಲಿ, ಮಹ್ಮದ್ ಘಜ್ನಿಯು ದೇವಾಲಯ ಮತ್ತು ಅದರ ಪೂಜ್ಯ ಲಿಂಗವನ್ನು ನಾಶಪಡಿಸಿದಾಗ, ಅದು ಅತ್ಯಂತ ವಿನಾಶಕಾರಿ ಹೊಡೆತವಾಗಿತ್ತು. ಈ ಲಿಂಗವು ಭೂಮಿಯಿಂದ ಸುಮಾರು 3 ಅಡಿ ಎತ್ತರದಲ್ಲಿ ತೇಲುತ್ತಿತ್ತು ಎಂದು ಹೇಳಲಾಗುತ್ತದೆ ಹಾಗೂ ಲಕ್ಷಾಂತರ ಭಕ್ತರು ಇಲ್ಲಿ ಶಿವ ನಾಮ ಜಪ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು.
ದೇವಾಲಯದ ನಾಶವಾದರೂ, ಭಕ್ತರಲ್ಲಿನ ಶ್ರದ್ಧೆಯನ್ನು ನಾಶಪಡಿಸಲು ಅದರಿಂದ ಸಾಧ್ಯವಾಗಲಿಲ್ಲ ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ. ಅಗ್ನಿಹೋತ್ರಿ ಬ್ರಾಹ್ಮಣರು ಶಿವಲಿಂಗದ ಕೆಲವು ತುಣುಕುಗಳನ್ನು ಸಂಗ್ರಹಿಸಿ, ಶತಮಾನಗಳ ಕಾಲ ಅದನ್ನು ದಕ್ಷತೆಯಿಂದ ರಕ್ಷಿಸಿದರು. ಈ ಪವಿತ್ರ ಲಿಂಗದ ಅವಶೇಷಗಳು ಶ್ರೀ ಪ್ರಣವಾನಂದ ಸ್ವಾಮಿ ಮತ್ತು ಶ್ರೀ ಶಿವಾನಂದ ಸ್ವಾಮಿ ಮುಂತಾದ ಮಹಾನ್ ಸಂತರ ಮೂಲಕ ಹಾದುಹೋಗಿ, ಸೀತಾರಾಮ ಶಾಸ್ತ್ರಿಯವರ ಕುಟುಂಬದ ವರೆಗೆ ತಲುಪಿದವು.
ಶ್ರೀ ಸೀತಾರಾಮ ಶಾಸ್ತ್ರಿಯವರು ಈ ಪವಿತ್ರ ಲಿಂಗವನ್ನು ಇಪ್ಪತ್ತು ವರ್ಷಗಳಿಗಿಂತ ಹೆಚ್ಚು ಕಾಲ ಸಂರಕ್ಷಿಸಿದ್ದಾರೆ. ಈ ಕ್ಷಣಕ್ಕೆ ಕಾರಣವಾದ ಪರಂಪರೆಯನ್ನು ಅವರು ಹೀಗೆ ನೆನಪಿಸಿಕೊಳ್ಳುತ್ತಾರೆ, "ಇದು ಶ್ರೀ ಪ್ರಣವೇಂದ್ರ ಸರಸ್ವತಿ ಮಹಾಸ್ವಾಮಿಗಳಿಗೆ ತಲುಪಿತು. ಅವರು ಇದನ್ನು ಕಂಚಿ ಶಂಕರಾಚಾರ್ಯ ಸ್ವಾಮಿ ಪರಮಪೂಜ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಮಹಾಸ್ವಾಮಿಯವರ ಬಳಿ ಕೊಂಡೊಯ್ದು, ಪ್ರತಿಷ್ಠಾಪನೆಗೆ ಆಶೀರ್ವಾದ ಕೋರಿದರು. ಸ್ವಾಮಿಗಳು ಆಶೀರ್ವದಿಸಿ, 'ಇದನ್ನು ಪ್ರತಿಷ್ಠಾಪಿಸಲು 100 ವರ್ಷ ಹಿಡಿಯಬಹುದು, ಈಗ ನೀವು ಇದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ’ ಎಂದು ಹೇಳಿದರು."
ಸೀತಾರಾಮ ಶಾಸ್ತ್ರಿಯವರು ಮುಂದುವರಿಸುತ್ತಾ, “ನಾನು ಇತ್ತೀಚೆಗೆ ಲಿಂಗಗಳನ್ನು ಕಂಚಿ ಶಂಕರಾಚಾರ್ಯರ ಬಳಿಗೆ ತೆಗೆದುಕೊಂಡು ಹೋಗಿ ಇದನ್ನು ಹೇಗೆ ಮುಂದುವರಿಸಬೇಕೆಂದು ಕೇಳಿದೆ. ಅವರು ಹೇಳಿದರು, 'ಸುಮಾರು 100 ವರ್ಷಗಳು ಕಳೆದಿವೆ, ಮತ್ತು ಈಗ ಅದರ ಪ್ರತಿಷ್ಠಾಪನೆಯ ಸಮಯ ಬಂದಿದೆ.' ಆದರೆ ಏನಾದರೂ ಮಾಡುವ ಮೊದಲು ಅವರು ಶರೀರ ತ್ಯಾಗ ಮಾಡಿದರು.” ನಂತರ ಶಾಸ್ತ್ರಿಯವರು ಅವುಗಳನ್ನು ಪರಮಪೂಜ್ಯ ಶ್ರೀ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳ ಬಳಿಗೆ ತಂದರು. “ಅವರು ನನಗೆ, 'ಬೆಂಗಳೂರಿನಲ್ಲಿ ಒಬ್ಬ ಮಹಾತ್ಮ ಇದ್ದಾರೆ. ನೀವೇ ಅವುಗಳನ್ನು ಅವರ ಬಳಿಗೆ ತೆಗೆದುಕೊಂಡು ಹೋಗಬೇಕು (ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಉಲ್ಲೇಖಿಸಿ) ಮತ್ತು ಈ ಅವಶೇಷಗಳ ಕಥೆಯನ್ನು ಅವರಿಗೆ ಹೇಳಬೇಕು. ಅವರು ಅದರ ಪ್ರತಿಷ್ಠಾಪನೆಗೆ ನಿಮಗೆ ಸಹಾಯ ಮಾಡುತ್ತಾರೆ’ ಎಂದು ಸಲಹೆ ನೀಡಿದರು. ಇದು ಗುರುದೇವ ಶ್ರೀ ಶ್ರೀ ರವಿ ಶಂಕರ್ ರವರ ಅನುಗ್ರಹದಿಂದ ಸೋಮನಾಥಕ್ಕೆ ಮರಳುತ್ತಿದೆ."
2007ರಲ್ಲಿ ಈ ಲಿಂಗದ ತುಂಡುಗಳ ಮೇಲೆ ನಡೆಸಿದ ಭೂವೈಜ್ಞಾನಿಕ ಅಧ್ಯಯನದಲ್ಲಿ ಅಚ್ಚರಿ ಮೂಡಿಸುವ ಸಂಗತಿಗಳನ್ನು ಪತ್ತೆ ಹಚ್ಚಲಾಯಿತು. ಸಾಮಾನ್ಯವಾಗಿರುವ ಅಯಸ್ಕಾಂತಗಳಿಗಿಂತ ವಿಭಿನ್ನವಾಗಿ, ಈ ಕಲ್ಲುಗಳು ಕೇಂದ್ರದಲ್ಲಿ ಪ್ರಬಲ ಚುಂಬಕ ಶಕ್ತಿಯನ್ನು ಹೊಂದಿದ್ದವು. ಸಾಮಾನ್ಯ ಅಯಸ್ಕಾಂತಗಳಿಗೆ ವಿರುದ್ಧವಾಗಿ, ಈ ಕಲ್ಲುಗಳಲ್ಲಿ ಅತೀ ಕಡಿಮೆ ಕಬ್ಬಿಣದ ಅಂಶವಿತ್ತು. ಇಂತಹ ಕಲ್ಲುಗಳ ಬಗ್ಗೆ ಭೂವಿಜ್ಞಾನಿಗಳಲ್ಲಿ ಯಾವುದೇ ಮಾಹಿತಿಯಿರಲಿಲ್ಲ. ಪ್ರಾಚೀನ ಪಠ್ಯಗಳು ಮತ್ತು ಕೆಲವು ಸಂಶೋಧನೆಗಳು, ಇವುಗಳು ಭೂಮಿಯಿಂದ ಬಂದಿರುವ ಸಾಧ್ಯತೆಯಿಲ್ಲ ಎಂಬುದನ್ನು ಸೂಚಿಸುತ್ತವೆ.
ಲಿಂಗಗಳಲ್ಲಿರುವ ಅದ್ಭುತವಾದ ಶಕ್ತಿಯನ್ನು ನಿರಾಕರಿಸಲು ಸಾಧ್ಯವಿಲ್ಲ. "ನೀವು ಇದನ್ನು ಕೈಯಲ್ಲಿ ಹಿಡಿದಾಗ, ಅದರಲ್ಲಿ ಅಯಸ್ಕಾಂತ ಗುಣವು ಹೊರಹೊಮ್ಮುತ್ತಿರುವುದು ಸ್ಪಷ್ಟವಾಗುತ್ತದೆ" ಎಂದು ಗುರುದೇವ ಶ್ರೀ ಶ್ರೀ ರವಿ ಶಂಕರ್ ರವರು ಈ ಪವಿತ್ರವಾದ ತುಂಡುಗಳನ್ನು ತೋರಿಸುತ್ತಾ ಹೇಳಿದರು.
ಲಿಂಗದ ಪುನಃಸ್ಥಾಪನೆಯು ಕೇವಲ ಒಂದು ಐತಿಹಾಸಿಕ ಘಟನೆಯಲ್ಲ, ಬದಲಾಗಿ ಪವಿತ್ರ ಶಿವಲಿಂಗದ ಅದ್ಭುತ ಪುನರಾಗಮನದ ಈ ದಿನವನ್ನು ತಾವು ಎಂದಾದರೂ ನೋಡುತ್ತೇವೆಯೇ ಎಂದು ಸಾವಿರಾರು ವರ್ಷಗಳಿಂದ ಪ್ರತಿಯೊಬ್ಬ ಹಿಂದೂ ಹೃದಯವನ್ನು ಗೊಂದಲಗೊಳಿಸುತ್ತಿದ್ದ ಪ್ರಶ್ನೆಗೆ ಉತ್ತರವಾಗಿದೆ.
ಪೂರ್ಣ ಗೌರವಾದರಗಳೊಂದಿಗೆ ಸೋಮನಾಥದಲ್ಲಿ ಪ್ರತಿಷ್ಠಾಪನೆಯಾಗುವ ಮೊದಲು, ಗುರುದೇವರ ಮಾರ್ಗದರ್ಶನದಲ್ಲಿ, ಈ ಪವಿತ್ರ ಶಿವಲಿಂಗದ ತುಂಡುಗಳನ್ನು ಭಾರತದೆಲ್ಲೆಡೆ ಕರೆದೊಯ್ಯುವ ಯೋಜನೆ ನಡೆಯುತ್ತಿದೆ. ಈ ಮೂಲಕ ದೇಶದ ಮೂಲೆ ಮೂಲೆಗಳಲ್ಲಿನ ಭಕ್ತರಿಗೆ ಇದರ ದರ್ಶನ ಮಾಡಲು ಅನುವು ಮಾಡಿಕೊಡಲಾಗುತ್ತದೆ. ಹನ್ನೆರಡು ಜ್ಯೋತಿರ್ಲಿಂಗಗಳು, ಪ್ರಮುಖ ತೀರ್ಥಕ್ಷೇತ್ರಗಳು ಮತ್ತು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಈ ಶಿವಲಿಂಗಗಳನ್ನು ಕೊಂಡೊಯ್ಯಲಾಗುವುದು. ಇದು ದೇಶವನ್ನು ಅದರ ಆಳವಾದ ಆಧ್ಯಾತ್ಮಿಕ ಬೇರುಗಳೊಂದಿಗೆ ಮತ್ತೆ ಸಂಪರ್ಕಿಸುವ ಪ್ರಯಾಣವಾಗಿದೆ.
ಗುರುದೇವ ಶ್ರೀ ಶ್ರೀ ರವಿ ಶಂಕರ್ ರವರು ತಾವು ಕುಂಭಮೇಳದಲ್ಲಿ, ಕಂಚಿ ಶಂಕರಾಚಾರ್ಯರನ್ನೂ ಒಳಗೊಂಡು ವಿವಿಧ ಧಾರ್ಮಿಕ ಗುರುಗಳೊಂದಿಗೆ ಇದರ ಬಗ್ಗೆ ಚರ್ಚೆ ನಡೆಸಿದುದಾಗಿ ಹೇಳಿದರು. ಕಂಚಿ ಶಂಕರಾಚಾರ್ಯರು ಕೂಡ ಇದನ್ನು ಸಾರ್ವಜನಿಕ ಭಕ್ತರ ದರ್ಶನಕ್ಕೆ ಒದಗಿಸಬೇಕೆಂದು ಅಭಿಪ್ರಾಯಪಟ್ಟರು. ಈ ಪಯಣವು ಲಕ್ಷಾಂತರ ಜನರು, ಕಾಲಕ್ರಮೇಣ ಕಳೆದುಹೋಗಿದೆ ಎಂದು ನಂಬಿದ್ದ ತಮ್ಮ ಇತಿಹಾಸದ ಒಂದು ಭಾಗವನ್ನು ವೀಕ್ಷಿಸಲು ಮತ್ತು ಮರುಸಂಪರ್ಕಿಸಲು ಒಂದು ಅವಕಾಶವಾಗಿದೆ.
ಸೋಮನಾಥ ಕಥೆಯು ಹಿಂದೂ ಮನಸ್ಸಿನಲ್ಲಿ ಆಳವಾಗಿ ಹುದುಗಿದೆ. ಈ ದೇವಾಲಯಕ್ಕೆ ಚಂದ್ರದೇವನ ಹೆಸರನ್ನು ಇಡಲಾಗಿದೆ. ಚಂದ್ರನು ಶಿವನನ್ನು ಪೂಜಿಸಿ ತನ್ನ ದುಃಖಗಳಿಂದ ಮುಕ್ತನಾದನು. ಮಾನವ ಮನಸ್ಸಿನ ಮೇಲೆ ಚಂದ್ರನ ಪ್ರಭಾವವನ್ನು ಬಹಳ ಹಿಂದಿನಿಂದಲೂ ಅರ್ಥೈಸಲಾಗಿದೆ. ಚಂಚಲ ಮನಸ್ಸಿನ ಅಂತಿಮ ಆಶ್ರಯವಾಗಿ ಶಿವನು ತನ್ನ ತಲೆಯ ಮೇಲೆ ಅರ್ಧಚಂದ್ರನನ್ನು ಹಿಡಿದಿಟ್ಟುಕೊಳ್ಳುತ್ತಾನೆ, ಇದು ಭಾವನೆಗಳು ಮತ್ತು ಬುದ್ಧಿಶಕ್ತಿಯ ಮೇಲೆ ನಿಯಂತ್ರಣ ಸಾಧಿಸುವುದರ ಸಂಕೇತವಾಗಿದೆ.
ಪವಿತ್ರ ಶಿವಲಿಂಗದ ಭಾಗಗಳು ಭಾರತದೆಲ್ಲೆಡೆ ಪಯಣ ಮಾಡಿದ ಬಳಿಕ, ಅಂತಿಮವಾಗಿ ಸೋಮನಾಥ ದೇವಾಲಯದಲ್ಲಿ ಪ್ರತಿಷ್ಠಾಪನೆಗೆ ಹಿಂತಿರುಗಲಿವೆ.
ಸೋಮನಾಥ ಶಿವಲಿಂಗದ ತುಣುಕುಗಳ ಪುನರುತ್ಥಾನವು ಭಾರತಕ್ಕೆ ಬಹಳ ಮಹತ್ವದ ಕ್ಷಣವಾಗಿದೆ. 500 ವರ್ಷಗಳ ನಂತರ ರಾಮ ಮಂದಿರದ ಪುನಃಸ್ಥಾಪನೆಯಂತೆಯೇ, ಸೋಮನಾಥ ಶಿವಲಿಂಗ ಪ್ರತಿಷ್ಠಾಪನೆಯೂ ಸನಾತನ ಧರ್ಮದ ಶಾಶ್ವತತೆಯ ಮತ್ತು ಭಕ್ತಿ ಪರಂಪರೆಯ ಮತ್ತೊಂದು ಅಪರೂಪದ ಸಾಧನೆಯಾಗಲಿದೆ.