

ಬೈಂದೂರು: ಮಕ್ಕಳಲ್ಲಿರುವ ಸೃಜನಶೀಲತೆ ವೃದ್ಧಿಸಲು ಹಾಗೂ ಸುಪ್ತ ಪ್ರತಿಭೆಯನ್ನು ಹೊರತರಲು ಸ್ಪರ್ಧೆಗಳು ಸಹಕಾರಿಯಾಗಿದ್ದು, ಗುಣಾತ್ಮಕ ಕಲಿಕೆಗೂ ಪೂರಕವಾಗಿವೆ. ಶಿಕ್ಷಣವನ್ನು ಅಂಕಗಳಿಕೆಯ ಸಾಧನವಾಗಿ ಮಾತ್ರ ಪರಿಗಣಿಸದೆ ಕಲೆ, ಸಾಹಿತ್ಯ, ಕ್ರೀಡೆಯನ್ನೂ ಒಳಗೊಂಡಂತೆ ನೋಡುವುದರಿಂದ ಮಕ್ಕಳ ಬೌದ್ಧಿಕ ವಿಕಾಸ ಸಾಧ್ಯವಾಗುತ್ತದೆ ಎಂದು ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಜೀವನ್‌ಕುಮಾರ್ ಶೆಟ್ಟಿ ಹೇಳಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಾಗೂ ಉಡುಪಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕ- ಬಾಲಕಿಯರ ನೆಟ್‌ಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇವಳದ ಇಒ ಪ್ರಶಾಂತ್‌ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಾಹಾಲಿಂಗ ನಾಯ್ಕ, ಸುಧಾ ಕೆ., ಕೊಲ್ಲೂರು ಗ್ರಾಪಂ ಅಧ್ಯಕ್ಷೆ ಪ್ರಸನ್ನಾ ಶರ್ಮ, ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿವೀಕ್ಷಕ ಕೃಷ್ಣ ಮೊಗವೀರ, ಜಿಲ್ಲಾ ಅಮೆಚೂರ್ ನೆಟ್‌ಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಸಚಿನ್‌ಕುಮಾರ್ ಶೆಟ್ಟಿ, ಖಜಾಂಚಿ ಅವಿನಾಶ್, ಪ್ರಾಂಶುಪಾಲ ಗೋಪಾಲಕೃಷ್ಣ ಜಿ.ಬಿ., ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ಉಪಸ್ಥಿತರಿದ್ದರು. ಉಪನ್ಯಾಸಕಿ ಸಂಗೀತಾ ಶೆಟ್ಟಿ ನಿರೂಪಿಸಿದರು. ಉಪನ್ಯಾಸಕ ರಾಮ ನಾಯ್ಕ ಕೆ ಬಿ. ವಂದಿಸಿದರು.
ಕ್ರೀಡಾಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಬೆಳೆಸಬೇಕೆಂಬ ನೆಲೆಯಲ್ಲಿ ನಮ್ಮ ಕಾಲೇಜಿನಲ್ಲಿ ನಿರಂತರವಾಗಿ ವಿವಿಧ ಪಂದ್ಯಾಟಗಳನ್ನು ಆಯೋಜಿಸಿ ಪ್ರೋತ್ಸಾಹಿಸಲಾಗುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆ ಹಾಗೂ ರಾಜ್ಯಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಹಲವು ಬಹುಮಾನಗಳನ್ನು ಪಡೆಯುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. - ಸುಕೇಶ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಉಪನ್ಯಾಸಕ