ಬಾಲ್ ಬ್ಯಾಡ್ಮಿಂಟನ್, ಟೆನ್ನಿಕಾಯ್ಟಿನಲ್ಲಿ ರಾಜ್ಯಮಟ್ಟಕ್ಕೆ

gan (4)
Published on

ಕುಂದಾಪುರ:

ಗಂಗೊಳ್ಳಿ ಎಸ್.ವಿ. ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಮತ್ತು ಟೆನ್ನಿಕಾಯ್ಟಿ ಪಂದ್ಯಾಟದ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಗಂಗೊಳ್ಳಿಯ ಎಸ್.ವಿ. ಪದವಿಪೂರ್ವ ಕಾಲೇಜು ತಂಡ ಹಾಗೂ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ತಂಡ ಕ್ರಮವಾಗಿ ಹುಡುಗರ ಮತ್ತು ಹುಡುಗಿಯರ ವಿಭಾಗದಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಟೆನ್ನಿಕಾಯ್ಟಿನಲ್ಲಿ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜು ತಂಡ ಮತ್ತು ಗಂಗೊಳ್ಳಿಯ ಎಸ್.ವಿ.ಪದವಿಪೂರ್ವ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಉಡುಪಿ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು, ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್, ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ರೋಟರಿ ಕ್ಲಬ್ ಮತ್ತು ಎಸ್.ವಿ.ಶಾಲೆಗಳ ಹಳೇ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು.

ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಗಂಗೊಳ್ಳಿಯ ಎಸ್.ವಿ.ಪದವಿಪೂರ್ವ ಕಾಲೇಜು ಹುಡುಗಿಯರ ತಂಡ ಹಾಗೂ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ಹುಡುಗರ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ. ಟೆನ್ನಿಕಾಯ್ಟಿನಲ್ಲಿ ಗಂಗೊಳ್ಳಿಯ ಎಸ್.ವಿ. ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಮತ್ತು ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಹುಡುಗಿಯರ ತಂಡ ರನ್ನರ್ ಅಪ್ ಆಗಿದೆ.

ಸಮಾರೋಪ ಸಮಾರಂಭದಲ್ಲಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಹರೀಶ್ ನಾಯಕ್, ಜಿಎಸ್‌ವಿಎಸ್ ಅಸೋಸಿಯೇಶನ್ ಖಜಾಂಚಿ ಎನ್.ಅಶ್ವಿನ್‌ನಾಯಕ್, ಎಸ್.ವಿ. ಶಾಲೆಗಳ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಭಾಸ್ಕರ ಎಚ್.ಜಿ. ಮತ್ತು ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸೂರಜ್ ಸಾರಂಗ್, ನಿರಂಜನ್ ಮತ್ತು ದೀಕ್ಷಿತ್ ಮೇಸ್ತ ಹಾಗೂ ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net