

ವಿಜಯವಾಣಿ ಸುದ್ದಿಜಾಲ ಉಡುಪಿ
ಪರಿಸರ ಉಳಿಸಿ ಎಂಬ ಸಂದೇಶದೊಂದಿಗೆ 23 ವರ್ಷದ ಯುವಕನೋರ್ವ ಉಡುಪಿಯಿಂದ ಲಡಾಕ್ವರೆಗೆ ಸತತ 11 ತಿಂಗಳು ಸೈಕಲ್ನಲ್ಲಿ ಯಾತ್ರೆ ನಡೆಸಿದ್ದು, 3,300 ಕಿಮೀ ಪ್ರಯಾಣಿಸಿ ಸಾಧನೆಯೊಂದಿಗೆ ಹುಟ್ಟೂರಿಗೆ ಮರಳಿದ್ದಾನೆ.
ಈ ವೇಳೆ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಅನಿಲಕುಮಾರ್, ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಜಯರಾಮ ಶೆಟ್ಟಿಗಾರ್, ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಆಲನ್ ಲೂವಿಸ್, ಶೇಖರ ಗುಜ್ಜರಬೆಟ್ಟು, ಶಾಲೆಟ್ ಮಥಾಯಸ್, ಶಿಕ್ಷಕ-ರಕ್ಷಕ ಸಂಘದ ಗಣೇಶ ಮೇಸ್ತ ಇತರರಿದ್ದರು.
ಯುವಕನಿಗೆ ಯಾತ್ರೆಯಲ್ಲಿ ಆಹಾರಕ್ಕೆ ಹೆಚ್ಚಿನ ಹಣ ಖರ್ಚಾಗಿದ್ದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಹಾಗೂ ಸೈಕಲಿಸ್ಟ್ ಆಗಿರುವ ಡಾ.ವಿನ್ಸೆಂಟ್ ಆಳ್ವಾ ಅವರು ದಾನಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಭರಿಸಿದ್ದಾರೆ. ಸೈಕಲ್ ಸಹ ಕೊಡುಗೆಯಾಗಿ ನೀಡಿ ವಿದ್ಯಾರ್ಥಿಗೆ ಪ್ರೋತ್ಸಾಹಿಸಿದ್ದಾರೆ. ನಮ್ಮ ಕಾಲೇಜಿನ ಯಾವುದೇ ವಿದ್ಯಾರ್ಥಿಗಳು ಇಂತಹ ಸಾಧನೆ ಮಾಡುವುದಿದ್ದರೆ ಸಂಪೂರ್ಣ ಸಹಕಾರ ಕೊಡುವುದಾಗಿ ಡಾ.ವಿನ್ಸೆಂಟ್ ಆಳ್ವಾ ತಿಳಿಸಿದರು.
ಉಡುಪಿಯಿಂದ 2024ರ ಅ.15ರಂದು ಸೈಕಲ್ ಮೂಲಕ ಲಡಾಖ್ಗೆ ದಿನೇಶ ಪ್ರಯಾಣ ಬೆಳೆಸಿದ್ದು 2025ರ ಸೆ.15ರಂದು ಲಡಾಕ್ ತಲುಪಿದ್ದನು. ಸತತ 330 ದಿನ ಸೈಕಲ್ ಮೂಲಕ 8 ರಾಜ್ಯಗಳಿಗೆ ಭೇಟಿ ನೀಡಿದ್ದಾನೆ. ಕರ್ನಾಟಕದಿಂದ ಆರಂಭಗೊಂಡು, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ ಮೂಲಕವಾಗಿ ಜಮ್ಮು-ಕಾಶ್ಮೀರ ತಲುಪಿದ್ದಾನೆ. ಕಾಶ್ಮೀರದ ಥಾಂಗ್ ಗ್ರಾಮದ ರಸ್ತೆ ವರ್ಷದಲ್ಲಿ 6 ತಿಂಗಳು ಮಾತ್ರ ತೆರೆದಿರುತ್ತದೆ. ಹೀಗಾಗಿ 1 ತಿಂಗಳು ಮುಂಬಯಿಯಲ್ಲಿ ವಿಶ್ರಾಂತಿ, 3 ತಿಂಗಳು ಗುಜರಾತ್ನಲ್ಲಿದ್ದರು. ಲಡಾಕ್ನ ಛಾಂಗ್ಗೆ ಭೇಟಿ ನೀಡಿದ್ದು, ಅದು ಭಾರತದ ಗಡಿಗ್ರಾಮ. ಪಕ್ಕದಲ್ಲೇ ಪಾಕಿಸ್ಥಾನ ಭೂಪ್ರದೇಶ ಕಾಣಿಸುತ್ತದೆ.
ಪರಿಸರ ಉಳಿಸಿ ಎಂದು ಜಾಗೃತಿ ಮೂಡಿಸಲು ಯಾತ್ರೆ ಕೈಗೊಂಡಿದ್ದೇನೆ. ಈ ವಿಚಾರ ಹೇಳಿದಾಗ ಹೆತ್ತವರು ಬೇಡ ಎಂದರೂ ಬಳಿಕ ಪ್ರೋತ್ಸಾಹ ನೀಡಿದರು. ಈ ಹಿಂದೆ ಉಡುಪಿಯಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹೋಗಿದ್ದೆ. ಉಡುಪಿಯಿಂದ ಕನ್ಯಾಕುಮಾರಿಗೆ 21 ದಿನ 1,500 ಕಿಮೀ ಸೈಕಲ್ ಯಾತ್ರೆ ಮಾಡಿದ್ದೆ. ನನ್ನ ಈ ಸಾಧನೆಗೆ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವಾ ಅವರ ಸಹಕಾರವೇ ಕಾರಣ. | ದಿನೇಶ ಬೋವಿ. ಸೈಕಲ್ನಲ್ಲಿ ಯಾತ್ರೆ ನಡೆಸಿದ ಸಾಧಕ.