

RTI Act : ಕೋಲಾರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತರಬೇತಿ ಹಾಗೂ ಸಾರ್ವಜನಿಕರಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರುಗಳು ನಾಳೆ ( ಮೇ 17 ) ಹಮ್ಮಿಕೊಂಡಿದ್ದಾರೆ.
ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರುವುದು, ಭ್ರಷ್ಟಾಚಾರಕ್ಕೆ ಕಡಿತವಾಣ ಹಾಕುವುದು ಹಾಗೂ ಹೊಣೆಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರ 2005 ರಲ್ಲಿ ಮಾಹಿತಿ ಹಕ್ಕು ಅಧಿನಿಯಮವನ್ನು ಜಾರಿಗೆ ತಂದಿದೆ.
ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಮೇಲಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಮಾಹಿತಿ ಲಭ್ಯವಾಗುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಆದ್ದರಿಂದ ಮಾಹಿತಿ ಆಯೋಗ ಪಿಐಒ ಗಳಿಗೆ ಅರಿವು ಮೂಡಿಸಲು ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಮೇ 17 ರಂದು ಕೋಲಾರ ಜಿಲ್ಲೆಯಲ್ಲಿ ಆರ್‌ಟಿಐ ಕಾಯ್ದೆ ಬಗ್ಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತರಬೇತಿ ಹಾಗೂ ಸಾರ್ವಜನಿಕರೊಂದಿಗೆ ಚರ್ಚೆ ನಡೆಯಲಿದೆ. ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಾಳೆ ಬೆಳ್ಳಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು, ನಂತರ ಸಾರ್ವಜನಿಕ ಭೇಟಿ ನಡೆಯಲಿದೆ.
ಕೋಲಾರದ ತರಬೇತಿ ಶಿಬಿರದಲ್ಲಿ ಮಾನ್ಯ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಹಾಗೂ ರಾಜಶೇಖರ ಎಸ್. ರವರು ಭಾಗವಹಿಸಲಿದ್ದಾರೆ.