ದೇಗುಲಕ್ಕೆ ಪ್ರತ್ಯೇಕ ರಕ್ಷಣೆ: ತುರ್ತು ಪರಿಸ್ಥಿತಿ ವಿರುದ್ಧ ಸೆಣಸಿದವರಿಗೆ ಪಿಂಚಣಿ; ಹುಬ್ಬಳ್ಳಿ ಕಾರ್ಯಕಾರಿಣಿಯಲ್ಲಿ ಸಿಎಂ ಭರವಸೆ

Karyakarini
ಎಂಎಲ್​ಸಿ ಚುನಾವಣೆಯಲ್ಲಿ ವಿಜೇತರಾದವರನ್ನು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಬುಧವಾರ ಸನ್ಮಾನಿಸಲಾಯಿತು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಉಪಾಧ್ಯಕ್ಷೆ ಡಿ. ಅರುಣಾ, ಪ್ರಮುಖರಾದ ಸಿ.ಟಿ. ರವಿ, ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ ಇದ್ದರು.
Published on

ಬೆಂಗಳೂರು: ಹಿಂದು ದೇಗುಲಗಳನ್ನು ಕಾನೂನು ಕುಣಿಕೆಯಿಂದ ಮುಕ್ತಗೊಳಿಸುವುದೂ ಸೇರಿದಂತೆ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲಿಗೆ ಹೋದವರಿಗೆ ಸ್ವಾತಂತ್ರ್ಯ ಯೋಧರ ಮಾದರಿಯಲ್ಲಿ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಲಹೆಯನ್ನು ಪರಿಶೀಲಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಬುಧವಾರ ಮುಕ್ತಾಯವಾದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡಲಾಯಿತು. ತುರ್ತು ಪರಿಸ್ಥಿತಿ ವಿರುದ್ಧ ರಾಜ್ಯದಲ್ಲೂ ದೊಡ್ಡ ಹೋರಾಟ ನಡೆದಿತ್ತು. ಅದರಲ್ಲಿ ಭಾಗವಹಿಸಿದವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಬಹುತೇಕರು ಈಗ ಸಂಕಷ್ಟದಲಿದ್ದಾರೆ. ಅಂತಹವರಿಗೆ ಗೌರವ ನೀಡುವ ಕಾರ್ಯ ಮಾಡಬೇಕೆಂಬ ವಿಚಾರ ಚರ್ಚೆಯಾಯಿತು. ಈ ಬೇಡಿಕೆಗೆ ಸ್ಪಂದಿಸಿದ ಸಿಎಂ, ಮಾಹಿತಿ ಪಡೆದುಕೊಂಡು ಅಧಿಕಾರಿಗಳ ಜತೆ ರ್ಚಚಿಸಿ ಬಜೆಟ್​ನಲ್ಲಿ ಯಾವ ರೀತಿ ಸೇರಿಸಬಹುದೆಂಬ ಬಗ್ಗೆ ಪರಿಶೀಲನೆ ಮಾಡುವ ಭರವಸೆ ನೀಡಿದರು.

ಹಿಂದುತ್ವಕ್ಕೆ ಜೈಕಾರ: ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನ ಸಭೆಯಲ್ಲಿ ಮಂಡಿಸಿರುವ ಸಿಎಂ ಬೊಮ್ಮಾಯಿ, ಇನ್ನೂ ಎರಡು ಹಿಂದುಪರ ಕಾರ್ಯಕ್ರಮ ತರುವುದಕ್ಕೆ ಸಿದ್ಧವೆಂದು ರಾಜ್ಯ ಕಾರ್ಯಕಾರಿಣಿಗೆ ಆಶ್ವಾಸನೆ ನೀಡಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ರಚಿಸಬೇಕು, ರಾಜ್ಯದಲ್ಲಿ ಎಲ್ಲಿಯೂ ಮತಾಂತರ ನಡೆಯದಂತೆ ಈ ಕಾರ್ಯಪಡೆ ಮೂಲಕ ಕ್ರಮ ಕೈಗೊಳ್ಳಬೇಕೆಂದು ಕಾರ್ಯಕಾರಿಣಿ ಸೂಚಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪರಿಷತ್​ನಲ್ಲಿ ವಿಧೇಯಕ ಅಂಗೀಕಾರವಾಗಿ ಕಾಯ್ದೆ ರೂಪ ಪಡೆಯುತ್ತಿದ್ದಂತೆ ನಿಯಮ ರಚಿಸುವ ಸಂದರ್ಭದಲ್ಲಿಯೇ ಸ್ಕಾ್ವಡ್ ಸಹ ರಚಿಸಲಾಗುತ್ತದೆ. ರಾಜ್ಯಕ್ಕೆ ಒಂದೇ ಇರಬೇಕೇ ಅಥವಾ ಪ್ರತಿ ಜಿಲ್ಲೆಗೆ ಒಂದರಂತೆ ಇರಬೇಕೇ ಎಂಬುದನ್ನು ರ್ಚಚಿಸಿ ನಿರ್ಧರಿಸುವುದಾಗಿ ಹೇಳಿದರು.

ಪ್ರತ್ಯೇಕ ಕಾನೂನು: ಹಿಂದು ದೇವಾಲಯಗಳನ್ನು ಕಾನೂನಿನ ಕುಣಿಕೆಯಿಂದ ಮುಕ್ತಗೊಳಿಸಬೇಕು. ಆಯಾ ದೇವಾಲಯದಲ್ಲಿ ಸಂಗ್ರಹವಾಗುವ ದೇಣಿಗೆ ಅದೇ ದೇವಾಲಯದ ಅಭಿವೃದ್ಧಿಗೆ ವೆಚ್ಚವಾಗಬೇಕು ಎಂಬ ಸಲಹೆಯೂ ಕಾರ್ಯಕಾರಿಣಿಯಿಂದ ಬಂದಿದೆ. ಪ್ರತ್ಯೇಕ ಕಾನೂನು ರಚಿಸುವ ಭರವಸೆಯನ್ನು ಬೊಮ್ಮಾಯಿ ನೀಡಿದ್ದಾರೆ.

ಹೈಕಮಾಂಡ್ ಕಣ್ಣು: ರಾಜ್ಯದ ಪ್ರತಿ ಬೆಳವಣಿಗೆಯನ್ನು ಹೈಕಮಾಂಡ್ ಗಮನಿಸುತ್ತಿದೆ. ಪ್ರತಿಯೊಬ್ಬರ ಬಗ್ಗೆಯೂ ವರದಿ ಪಡೆಯುತ್ತಿದೆ. ಆದ್ದರಿಂದ ಯಾರೇ ಆದರೂ ಅನಗತ್ಯ ಹೇಳಿಕೆ ನೀಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆ ಯನ್ನು ಕಾರ್ಯಕಾರಿಣಿ ನೀಡಿದೆ.

ಅಧ್ಯಕ್ಷರ ವಿರುದ್ಧ ಅಸಮಾಧಾನ: ಪಕ್ಷದ ಕೆಲ ಮುಖಂಡರು ಮಾಧ್ಯಮಗಳ ಮುಂದೆ ಬೇಕಾಬಿಟ್ಟಿ ಹೇಳಿಕೆ ನೀಡುವುದಕ್ಕೆ ರಾಜ್ಯಾಧ್ಯಕ್ಷರ ನಿಷ್ಕ್ರಿಯತೆಯೇ ಕಾರಣವೆಂದು ಉಸ್ತುವಾರಿ ಅರುಣ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ. ರಾಜ್ಯಾಧ್ಯಕ್ಷರು ಒಂದಿಬ್ಬರ ವಿರುದ್ಧ ಕ್ರಮ ಕೈಗೊಂಡಿದ್ದರೆ ಇಂತಹ ಅಶಿಸ್ತು ಇರುತ್ತಿರಲಿಲ್ಲ. ಇನ್ನು ಮುಂದಾದರೂ ಮೈಕ್ ಕಂಡ ಕೂಡಲೇ ಮಾತನಾಡು ವುದಕ್ಕೆ ಕಡಿವಾಣ ಹಾಕುವಂತೆ ಸೂಚನೆ ನೀಡಿದರೆಂದು ಹೇಳಲಾಗಿದೆ.

ಬಾರದ ಜಾರಕಿಹೊಳಿ ಬ್ರದರ್ಸ್: ಕಾರ್ಯಕಾರಿಣಿ ನಂತರ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಎರಡು ದಿನಗಳ ಹಿಂದೆಯೇ ಹೇಳಲಾಗಿತ್ತು. ಸಿಎಂ ಪ್ರವಾಸ ಪಟ್ಟಿಯಲ್ಲೂ ಕೋರ್ ಕಮಿಟಿಯಲ್ಲಿ ಭಾಗವಹಿಸುವ ಪ್ರಸ್ತಾಪವಿತ್ತು. ಆದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮಾಜಿ ಸಿಎಂ ಯಡಿಯೂರಪ್ಪ ಬಾರದೇ ಇರುವ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿಲ್ಲ. ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸೋತು, ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾರಣರಾದವರ ವಿರುದ್ಧ ಕ್ರಮ ಸೇರಿ ಕೆಲ ಪ್ರಮುಖ ವಿಷಯಗಳು ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಗಲಿವೆ ಎನ್ನಲಾಗಿತ್ತು. ಆದರೆ, ಸಭೆ ನಡೆಯಲೇ ಇಲ್ಲ. ಜಾರಕಿಹೊಳಿ ಸಹೋದರರು ಕಾರ್ಯಕಾರಿಣಿಯ 2ನೇ ದಿನ ಸಹ ಹಾಜರಾಗಲಿಲ್ಲ. ಸಭೆಗೆ ಗೈರಾಗಲು ಅವರು ಅನುಮತಿ ಪಡೆದುಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದರು.

ಮುಂದಿನ ಕಾರ್ಯಕಾರಿಣಿ ವಿಜಯನಗರದಲ್ಲಿ ರಾಜ್ಯ ಬಿಜೆಪಿಯ ಮುಂದಿನ ಕಾರ್ಯಕಾರಿಣಿಯನ್ನು ವಿಜಯನಗರ ಜಿಲ್ಲೆಯಲ್ಲಿ 2022ರ ಮಾರ್ಚ್ 28, 29ರಂದು ನಡೆಸಲು ನಿರ್ಧರಿಸಲಾಗಿದೆ. ಸಚಿವ ಆನಂದಸಿಂಗ್ ನೇತೃತ್ವದಲ್ಲಿ ಕಾರ್ಯಕಾರಿಣಿ ಸಂಘಟಿಸಲಾಗುತ್ತದೆ.

150ರ ಜಪ, ಕಾರ್ಯಕಾರಿಣಿ ಸಮಾರೋಪ

ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಸಲೀಸಾಗಿ ಗೆಲ್ಲಬೇಕು, ಅದಕ್ಕಿಂತ ಮೊದಲು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ವಿಧಾನ ಪರಿಷತ್ತಿನ ಕೆಲವು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಜಯ ಸಾಧಿಸಬೇಕೆಂಬ ಜಪದೊಂದಿಗೆ ಇಲ್ಲಿ ಏರ್ಪಾಟಾಗಿದ್ದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಬುಧವಾರ ಸಮಾರೋಪಗೊಂಡಿತು. ಜನಪರ ಕಾರ್ಯಕ್ರಮಗಳಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಅಭಿನಂದಿಸುವ ನಿರ್ಣಯ ಅಂಗೀಕರಿಸಲಾಯಿತು. ಶಿಸ್ತು, ಸಂಘಟನೆ, 150 ಸ್ಥಾನ ಇತ್ಯಾದಿ ವಿಚಾರಗಳು ಕಾರ್ಯಕಾರಿಣಿಯ ಮೊದಲ ದಿನವಾದ ಮಂಗಳವಾರ ಪ್ರಸ್ತಾಪವಾಗಿದ್ದವು. ಬುಧವಾರವೂ ಮತ್ತೆ ಪ್ರಸ್ತಾಪವಾಯಿತು. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಸೇರಿ ಬಿಜೆಪಿಯ ಮೂಲ ಸಿದ್ಧಾಂತಕ್ಕೆ ಪೂರಕವಾಗಿರುವ ಸರ್ಕಾರದ ನಿರ್ಧಾರಗಳ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವುದು, ಪಕ್ಷದ ತಳ ಮಟ್ಟದಲ್ಲಿ ಪೇಜ್ ಪ್ರಮುಖರ ನೇಮಕ ಹಾಗೂ ಪೇಜ್ ಸಮಿತಿಗೆ ಒತ್ತು ನೀಡುವುದು, ಪ್ರತಿಪಕ್ಷದ ದೌರ್ಬಲ್ಯಗಳನ್ನು ಜನರಿಗೆ ತಿಳಿಹೇಳುವುದು ಸೇರಿದಂತೆ ವಿವಿಧ ತಂತ್ರಗಳ ಮೂಲಕ ಗುರಿ ಸಾಧಿಸಬೇಕು ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿ ಪ್ರಮುಖರು ಪ್ರತಿಪಾದಿಸಿದರು.

ಪ್ರಮುಖ ಚರ್ಚಾ ವಿಷಯಗಳು

  • ತಕ್ಷಣ ನಿಗಮ-ಮಂಡಳಿಗಳ ಬದಲಾವಣೆ
  • ಕಾರ್ಯಕರ್ತರಿಗೆ ಅಧಿಕಾರದ ಹಂಚಿಕೆ
  • ಚುನಾವಣೆ ಸೋಲಿನ ಅವಲೋಕನ
  • ಬದ್ಧತೆಯಿಂದ ಪಕ್ಷದ ಸಂಘಟನೆ
  • ಇನ್ನಷ್ಟು ಕ್ರಿಯಾಶೀಲರಾಗಲು ಸಚಿವರಿಗೆ ಸೂಚನೆ
  • ಕಾಂಗ್ರೆಸ್ ಆರೋಪಗಳಿಗೆ ತಕ್ಷಣ ತಿರುಗೇಟು
  • ಬಜೆಟ್​ನಲ್ಲಿ ವಿಶೇಷ ಯೋಜನೆಗಳ ಘೋಷಣೆ

ಪಕ್ಷದ ಸಂಘಟನೆ ಬಲಗೊಳಿಸುವ ಕುರಿತು ಸಂದೇಶ ನೀಡಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಜನ ವಿರೋಧಿ ನೀತಿ ಬಗ್ಗೆಯೂ ಚರ್ಚೆ ಆಯಿತು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಕಷ್ಟು ಭ್ರಷ್ಟಾಚಾರ ಆಗಿತ್ತು. ಇದೆಲ್ಲವನ್ನೂ ಜನರೆದುರು ಇಡಲಾಗುತ್ತದೆ. | ಅರುಣ್ ಸಿಂಗ್ ಬಿಜೆಪಿ ರಾಜ್ಯ ಉಸ್ತುವಾರಿ ಗುಜರಾತ್ ಮಾದರಿಯಲ್ಲಿ ರಾಜ್ಯದ ಸಚಿವ ಸಂಪುಟ ರಚನೆಯಾಗಬೇಕು ಎಂಬುದು ಬಹುತೇಕ ಶಾಸಕರ ಆಶಯ. ಇದಕ್ಕಾಗಿ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ, 2008ರ ಹಾಗೂ ಹಾಲಿ ಸರ್ಕಾರದಲ್ಲಿ ಸಚಿವರಾದವರು ಸಂಪುಟ ವಿಸ್ತರಣೆಯಲ್ಲಿ ಮತ್ತೆ ಅವಕಾಶ ಪಡೆಯುವ ಬದಲು ಪಕ್ಷದ ಸಂಘಟನೆ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. | ಎಂ.ಪಿ.ರೇಣುಕಾಚಾರ್ಯ ಶಾಸಕ ಸಚಿವ ಸ್ಥಾನ ಬಿಟ್ಟುಕೊಡಲು ಪಕ್ಷದ ಹಿರಿಯರು ಸಿದ್ಧರಿದ್ದಾರೆ. ಕೇಂದ್ರ ವರಿಷ್ಠರು ಯಾರಿಗೆ ಸೂಚಿಸುತ್ತಾರೋ ಅವರು ಸಚಿವ ಸ್ಥಾನ ಬಿಟ್ಟು, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇವೆ. | ಕೆ.ಎಸ್.ಈಶ್ವರಪ್ಪ ಸಚಿವ

ಹೈಕಮಾಂಡ್ ಸ್ಪಷ್ಟತೆ ದೃಢ

ಹುಬ್ಬಳ್ಳಿ: ‘ನಾನು ಸಿಎಂ ಆಗಿ ಮುಂದುವರಿಯುವ ವಿಶ್ವಾಸ ಮೊದಲೇ ಇತ್ತು. ಹೈಕಮಾಂಡ್​ನಲ್ಲಿನ ಸ್ಪಷ್ಟತೆಯನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತೊಮ್ಮೆ ದೃಢಪಡಿಸಿದ್ದಾರೆ. ಹೈಕಮಾಂಡ್ ನನ್ನ ಮೇಲೆ ನಿರೀಕ್ಷೆ ಇಟ್ಟಿದೆ. ಅದನ್ನು ಸತ್ಯ ಮಾಡಲು ಎಲ್ಲ ರೀತಿಯಲ್ಲಿ ಪರಿಶ್ರಮ ಪಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯ ಸರ್ಕಾರದ ಮೇಲೆ ಹೈಕಮಾಂಡ್​ಗೆ ವಿಶ್ವಾಸವಿದ್ದು, ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಪಕ್ಷವನ್ನು ಬಲಿಷ್ಠಗೊಳಿಸಲಾಗುವುದು. ರಾಜಕೀಯ ಬೆಳವಣಿಗೆಗಳನ್ನು ಪಕ್ಷ ಮತ್ತು ಸರ್ಕಾರ ಒಟ್ಟಾಗಿ ಎದುರಿಸುವ ಕುರಿತು ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಸ್ಪಷ್ಟೋಕ್ತಿ ಬಂದಿದೆ. ಸದ್ಯ ಸಚಿವ ಸಂಪುಟ ವಿಸ್ತರಣೆ ಮಾಡುವ ಬೆಳವಣಿಗೆ ಇಲ್ಲ. ರಮೇಶ ಜಾರಕಿಹೊಳಿ ಅಷ್ಟೇ ಅಲ್ಲ, ಯಾರೇ ಆಗಲಿ ಅವರಿಗೆ ಎಲ್ಲಿ ಬೇಕಾದಲ್ಲಿ ಓಡಾಡುವ ಸ್ವಾತಂತ್ರ್ಯ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ರಾತ್ರಿ ಕರ್ಫ್ಯೂಗೆ ಇರುವ ಪರ-ವಿರೋಧ ಹೇಳಿಕೆಗಳ ಕುರಿತು ಬೆಂಗಳೂರಿನಲ್ಲಿ ರ್ಚಚಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net