ನಕಲಿ ವಿಲ್ ಸೃಷ್ಟಿಸಿ, ಮಗನಿಂದಲೇ ಆಸ್ತಿ ಕಬಳಿಕೆ ಯತ್ನ: ಎಫ್ಐಆರ್ ದಾಖಲು, ಪೊಲೀಸರಿಂದ ತನಿಖೆ..

FIR
Published on

ಬೆಂಗಳೂರು: ಮಗನೇ ತನ್ನ ತಂದೆಯ ವಿಲ್ ನಕಲಿ ಮಾಡಿ ಆಸ್ತಿ, ನಗದು, ಬ್ಯಾಂಕ್ ಖಾತೆಯಲ್ಲಿ ಹಣ ಲಪಟಾಯಿಸಿದ್ದಾನೆಂದು ಮಲತಾಯಿ ದೂರು ನೀಡಿದ್ದು, ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ರಾಜಾಜಿನಗರದ ಕೆ.ಬಿ. ಬೋಜಮ್ಮ (65) ಎಂಬುವರು ದೂರು ನೀಡಿದ್ದಾರೆ. ಇದರ ಅನ್ವಯ ಸಿ.ಸುರೇಶ್‌ ಕುಮಾರ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿ ಶ್ರೀರಾಂಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚನ್ನಪ್ಪ ಅವರಿಗೆ ಬೋಜಮ್ಮ ಸೇರಿ ಇಬ್ಬರು ಪತ್ನಿಯರು. ಮೊದಲ ಪತ್ನಿ ಲಕ್ಷ್ಮೀ 1983ರಲ್ಲಿ ಸಾವಿಗೀಡಾಗಿದ್ದು, ಇವರಿಗೆ ಮೂವರು ಗಂಡು ಮಕ್ಕಳು. 2014ರ ಜೂನ್ 7ರಂದು ಚನ್ನಪ್ಪ, ತನ್ನ ಆಸ್ತಿಯನ್ನು ಪ್ರತಿಯೊಬ್ಬರಿಗೂ ಸಮನಾಗಿ ಹಂಚಿ ನೋಂದಣಿ ಮಾಡಿಸಿ ವಿಲ್ ಮಾಡಿದ್ದಾರೆ. ಇದಾದ ಮೇಲೆ 2019ರಲ್ಲಿ ಚನ್ನಪ್ಪ ಮೃತಪಟ್ಟರು.

ಆ ನಂತರ ಪುತ್ರ ಸುರೇಶ್‌ ಕುಮಾರ್, ಹೊಸದಾಗಿ ನಕಲಿ ವಿಲ್ ಸೃಷ್ಟಿಸಿ ಗಾಂಧಿನಗರ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿ ಚನ್ನಪ್ಪನವರ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣ, ಬೆಲೆ ಬಾಳುವ ಆಸ್ತಿ, ವಸ್ತುಗಳನ್ನು ಲಪಟಾಯಿಸಿದ್ದಾರೆ ಎಂದು ಬೋಜಮ್ಮ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಸುರೇಶ್‌ ಕುಮಾರ್ ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದೂ ದೂರಿನಲ್ಲಿ ಬೋಜಮ್ಮ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net