ನಾಳಿನ ಸೂರ್ಯಗ್ರಹಣದ ವಿಶೇಷತೆ ಏನು? ಜನರಿಗೆ ಭೌತ ವಿಜ್ಞಾನಿ ಎ.ಪಿ ಭಟ್ ನೀಡುವ ಸಲಹೆಗಳೇನು?

Solar Eclipse
Published on

ಉಡುಪಿ: ಭಾನುವಾರ ಭಾರತ ಅಪರೂಪದ ಸೂರ್ಯ ಗ್ರಹಣಕ್ಕೆ ಸಾಕ್ಷಿಯಾಗಲಿದೆ. ರಾಜಸ್ಥಾನ, ಹರ್ಯಾಣ, ಉತ್ತರಖಂಡಗಳ ಕೆಲ ಪ್ರದೇಶಗಳಲ್ಲಿ ಕಂಕಣ ಸೂರ್ಯ ಗ್ರಹಣ, ಉಳಿದ ಭಾರತದ ಎಲ್ಲಾ ಪ್ರದೇಶದಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಆಗಲಿದೆ.

ಉಡುಪಿಯಲ್ಲಿ ಪಾರ್ಶ್ವ ಸೂರ್ಯಗ್ರಹಣ 40 ಅಂಶವಾಗಲಿದೆ ಎಂದು ಉಡುಪಿಯ ಭೌತ ವಿಜ್ಞಾನಿ ಡಾ. ಎ.ಪಿ ಭಟ್ ಮಾಹಿತಿ ನೀಡಿದ್ದಾರೆ. ಕಳೆದ ಡಿಸೆಂಬರ್ 26ರ ಕಂಕಣ ಸೂರ್ಯ ಗ್ರಹಣ ಹಾಗೂ ಭಾನುವಾರದ ಗ್ರಹಣ ಶತಮಾನಕ್ಕೊಮ್ಮೆ ಬರುವಂತಹುದು. ಹತ್ತು ವರ್ಷಗಳಲ್ಲೊಮ್ಮೆ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದರೆ ನಮಗಿನ್ನು ಪುನಃ ಕಂಕಣ ಸೂರ್ಯಗ್ರಹಣ 2064ಕ್ಕೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಣಾಂಗಣವಾದ ಹಾಸನ ಜಿ.ಪಂ ಸಭೆ: ಎಚ್​.ಡಿ. ರೇವಣ್ಣ, ಅಧ್ಯಕ್ಷೆಯ ವಾಗ್ವಾದದ ನಡುವೆ ಪತ್ನಿ ಭವಾನಿ ಎಂಟ್ರಿ

ಸೂರ್ಯ ಭೂಮಿಯ ನಡುವೆ ಚಂದ್ರ ನೇರ ಬಂದಾಗ ಸೂರ್ಯ ಗ್ರಹಣವಾಗುತ್ತದೆ. ಅದು ಕೆಲವೇ ಪ್ರದೇಶಗಳಲ್ಲಿ ಖಗ್ರಾಸ ಅಥವಾ ಕಂಕಣ ವಾಗಬಹುದು. ಚಂದ್ರ ಭೂಮಿಗಿಂತ ಸುಮಾರು 20 ಪಟ್ಟು ಚಿಕ್ಕವನಾದುದರಿಂದ ಸೂರ್ಯಗ್ರಹಣ ಹೆಚ್ಚೆಂದರೆ 7.5 ನಿಮಿಷ ಮಾತ್ರ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಚಂದ್ರ ಗ್ರಹಣವನ್ನು ನೇರ ಬರಿಗಣ್ಣಿನಿಂದ ನೋಡಬಹುದು. ಸೂರ್ಯಗ್ರಹಣ ಬರಿಗಣ್ಣಿನಿಂದ ನೋಡಲೇಬಾರದು. ಗ್ರಹಣ ಸಂಬಂಧ ತಯಾರಿಸಿದ ಕನ್ನಡದಿಂದ ಅಥವಾ ಪಿನ್ ಹೋಲ್ ಉಪಕರಣಗಳಿಂದ ಪರೋಕ್ಷವಾಗಿ ನೋಡಬಹುದು ಎಂದು ಹೇಳಿದರು.

ಮಳೆ, ಮೋಡ ಇಲ್ಲದಿದ್ದರೆ, ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವತಿಯಿಂದ ಅದರ ವೆಬ್ಸೈಟ್ ನಲ್ಲಿ ನೇರ ಪ್ರಸಾರದಲ್ಲಿ ಗ್ರಹಣ ವೀಕ್ಷಣೆ ಇರುತ್ತದೆ. ತಾವು ಮನೆಯಲ್ಲೇ ಕುಳಿತು ಗ್ರಹಣವೀಕ್ಷಣೆ ಮಾಡಬಹುದು ಎಂದು ಡಾ. ಎ. ಪಿ ಭಟ್ ಉಡುಪಿ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಕುಟುಂಬ ಸದಸ್ಯರ ಎಡವಟ್ಟು: ಕರೊನಾ ಸೋಂಕಿಲ್ಲದಿದ್ದರೂ ಆಸ್ಪತ್ರೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ ರೋಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net