More

    ಇಂದಿನ ಸೂರ್ಯಗ್ರಹಣದಿಂದ ಯಾರಿಗೆ ತೊಂದರೆ: ರಾಜಗುರು ದ್ವಾರಕಾನಾಥ್ ಭವಿಷ್ಯ

    | ಎಸ್.ದ್ವಾರಕಾನಾಥ್ ದೈವ ಚಿಂತಕರು

    ಖಂಡಗ್ರಾಸ ಸೂರ್ಯಗ್ರಹಣ ಎಂದರೆ ಶೇಕಡ 99 ಭಾಗ ಗ್ರಹಣ ಇದೆ. 90 ವರ್ಷದ ನಂತರ ಇಂತಹ ಗ್ರಹಣ ಸಂಭವಿಸುತ್ತಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಸೂರ್ಯಗ್ರಹಣ ಕಂಕಣಾಕೃತಿಯಲ್ಲಿ ಬಂದಿತ್ತು. ಅದಾದ ನಂತರವೇ ಕರೊನಾ ಕಂಡಿದ್ದು. ಈ ಗ್ರಹಣ ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ ಹಾಗೂ ಅಮಾವಾಸ್ಯೆ ದಿನ ಸಂಭವಿಸುತ್ತಿದೆ. ಈ ಗ್ರಹಣವು ಪ್ರಪಂಚದ ದೃಷ್ಟಿಯಿಂದ ಒಳ್ಳೆಯದಲ್ಲ. ಆಸ್ಟ್ರೇಲಿಯಾ, ಯುರೋಪ್, ಆಫ್ರಿಕಾದಲ್ಲೂ ಈ ಗ್ರಹಣ ಕಾಣುತ್ತದೆ.

    ಮೃಗಶಿರಾ ನಕ್ಷತ್ರದಲ್ಲಿ ಗ್ರಹಣ ಬಂದಿರುವುದು ವಿಷಾದಕರ. ನಾಲ್ಕು ದಿಕ್ಕುಗಳಲ್ಲೂ ಅಶಾಂತಿ ಮೂಡುತ್ತದೆ. ದಕ್ಷಿಣ ರಾಜ್ಯಗಳಲ್ಲಿ ಜಲಾವೃತ, ಪಶ್ಚಿಮದಲ್ಲಿ ಚಂಡಮಾರುತ, ಭೂಕಂಪನ ಭೀತಿ, ಉತ್ತರದಲ್ಲಿ ಅಗ್ನಿ ಅವಘಡ ಸಂಭವಿಸುತ್ತದೆ ಹಾಗೂ ಪಶ್ಚಿಮದ ಕರಾವಳಿ ಭಾಗಗಳು ಅಂದರೆ ಮುಂಬೈ, ಕೇರಳ, ಮಂಗಳೂರು, ತಮಿಳುನಾಡು ಭಾಗಗಳಲ್ಲಿ ಧನನಷ್ಟ, ಆಸ್ತಿಪಾಸ್ತಿ ನಷ್ಟ ಸಂಭವವಿದೆ. ಆಕಾಶ, ಭೂಮಿ, ವಾಯು, ಅಗ್ನಿ ಹಾಗೂ ವರುಣ-ಪಂಚಭೂತಗಳಿಂದಲೂ ಅಪಾಯವಿದೆ ಎಂಬುದು ಅಧ್ಯಯನದಿಂದ ತಿಳಿದುಬರುತ್ತದೆ.

    ಮನುಷ್ಯ ಧರ್ಮಪಾಲನೆ ಹೇಗೆ ಮಾಡಬೇಕು? ಮಾಡದಿದ್ದರೆ ಏನು ಶಿಕ್ಷೆ ಎನ್ನುವುದನ್ನು ಇದು ತಿಳಿಸಿಕೊಡುತ್ತದೆ. ಉತ್ತಮ ಮಳೆ ಬೆಳೆಯೂ ಆಗುತ್ತದೆ. ಧಾನ್ಯ ಸಂಗ್ರಹಣೆಯಿಂದ ಸುಖವಾಗಿರುವ ಅವಕಾಶವೂ ಇದೆ. ಸಂತ ಕಬೀರ ಭಿಕ್ಷೆ ಬೇಡುತ್ತ ಒಂದು ಮನೆಯ ಬಳಿ ಬರುತ್ತಾರೆ. ಮುದುಕಿಯೊಬ್ಬಳು ಬೀಸುಕಲ್ಲಿನಲ್ಲಿ ಹಿಟ್ಟು ಬೀಸುತ್ತಿರುತ್ತಾಳೆ. ‘ಬೀಸುವ ಕಲ್ಲಿನಲ್ಲಿ ಕಾಳನ್ನು ಪುಡಿ ಮಾಡಿದಂತೆಯೇ ನಮ್ಮ ಜೀವನವೂ ಅಲ್ಲವೇ’ ಎಂದರು. ಅದಕ್ಕೆ ಆ ಮುದುಕಿ ಹೇಳುತ್ತಾಳೆ, ‘ನಡುವಿನ ಗೂಟದ ಸುತ್ತ ಕೆಲ ಕಾಳುಗಳು ಹಾಗೆಯೇ ಉಳಿದುಕೊಂಡಿರುತ್ತವೆ. ಅಂತೆಯೇ ಧರ್ಮವನ್ನು ಪಾಲನೆ ಮಾಡುವವರೆಲ್ಲರೂ ಉಳಿಯುತ್ತಾರೆ. ದೈವವನ್ನು ನಂಬಿದವರು ಬದುಕುತ್ತಾರೆ’. ಪ್ರತಿಯೊಬ್ಬರೂ ಧರ್ಮಭಕ್ತಿ, ದೈವಭಕ್ತಿಯಿಂದ ಇರುವುದೊಂದೇ ದಾರಿ. ಧರ್ಮದ ಹಾದಿಯಲ್ಲಿ ನಡೆಯುವವರನ್ನು ದೈವವೇ ಕಾಪಾಡುತ್ತದೆ.

    ಜುಲೈ 15ಕ್ಕೆ ಕರ್ಕಾಟಕ ಸಂಕ್ರಮಣ ಆದ ನಂತರ ಕರೊನಾ ಸೋಂಕು ಇಳಿಮುಖವಾಗುತ್ತ ಸಾಗುತ್ತದೆ. ಸೂರ್ಯ ಪಥ ಬದಲಾಯಿಸಿ ದಕ್ಷಿಣಕ್ಕೆ ಬರುತ್ತಾನೆ. ಸೆಪ್ಟೆಂಬರ್ ಒಳಗೆ ರೋಗ ನಿಯಂತ್ರಣಕ್ಕೆ ಬರುತ್ತದೆ. ಜುಲೈ 15ರಿಂದ ಡಿಸೆಂಬರ್ 15ರವರೆಗೆ ಗ್ರಹಣದ ನೆರಳು ಇರುತ್ತದೆ. ಅಲ್ಲಿವರೆಗೆ ಪ್ರಧಾನಿ ಎಚ್ಚರಿಕೆಯಿಂದ ಇರಬೇಕು, ದೈವಬಲದಿಂದಲೇ ನಡೆಯಬೇಕು. ಆದರೆ ಭವ್ಯಭಾರತ ನಿರ್ಮಾಣ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.

    ಅಶಾಂತಿ ಕಾಡಲಿದೆ: ಗ್ರಹಣದಿಂದ ರಾಷ್ಟ್ರದಲ್ಲಿ ಅಶಾಂತಿ, ಕ್ಷೋಭೆ, ಸುನಾಮಿ, ಅಗ್ನಿಭಯ, ಚೋರಭಯ ಉಂಟಾಗುತ್ತದೆ. ಜನರು ಅಶಾಂತಿಯಿಂದಾಗಿ ಕಾನೂನಿಗೆ ಕೈಹಾಕುವ ಅಪಾಯವೂ ಇದೆ. ರೈತರ ಸಮಸ್ಯೆ ವಿಚಾರವೊಂದು ಗೊಂದಲಕ್ಕೆ ಕಾರಣವಾಗಿ ದಕ್ಷಿಣ ಭಾಗದಿಂದ ಅಶಾಂತಿ ಮೂಡುತ್ತದೆ. ಸೆಪ್ಟೆಂಬರ್ 20ರಂದು ರಾಹು ಮುಂದೆ ಹೋದ ನಂತರ ಇದು ಸಂಭವಿಸುತ್ತದೆ. ಪ್ರಪಂಚದಲ್ಲಿ ಗುರುಗಳ ಜಾಗ ಎರಡೇ ಕಡೆ ಇದೆ. ಒಂದು ಗಾಣಗಾಪುರ ಕ್ಷೇತ್ರ, ಮತ್ತೊಂದು ಚತುರಾಮ್ನಾಯ ಪೀಠಗಳಲ್ಲಿ ಒಂದಾದ ಶೃಂಗೇರಿ ಶಂಕರ ಮಠ. ನಮ್ಮ ನಡುವಿನ ವಸಿಷ್ಠರಂತಿರುವ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳು. ದೇವರೊಂದಿಗೆ ವಿಶೇಷ ಅನುಸಂಧಾನದಲ್ಲಿದ್ದಾರೆ. ಮೋದಿಯವರು ಸ್ವಾಮೀಜಿಯವರ ದರ್ಶನ ಪಡೆಯಬೇಕು.

    ಅಮೆರಿಕಕ್ಕೆ ಸಂಕಷ್ಟ: ಅಮೆರಿಕದಲ್ಲಿ ಸೋಂಕು ಹೆಚ್ಚಳವಾಗುತ್ತಲೇ ಇದೆ. ಗ್ರಹಗಳ ಮುನ್ನೋಟವನ್ನು ಗಮನಿಸಿದರೆ, ನವೆಂಬರ್​ನಲ್ಲಿ ನಡೆಯಬೇಕಿರುವ ಅಧ್ಯಕ್ಷೀಯ ಚುನಾವಣೆ ಮುಂದಕ್ಕೆ ಹೋಗುತ್ತದೆ. ಏಕೆಂದರೆ ಆ ವೇಳೆಗೆ ಅಲ್ಲಿ ಮತ್ತೊಂದು ಹೊಸ ರೋಗ ಹುಟ್ಟಿಕೊಳ್ಳುತ್ತದೆ. ಆಗ ಚುನಾವಣೆ ನಡೆಸುವುದು ಸಾಧ್ಯವಾಗುವುದಿಲ್ಲ.

    ರಾಮಮಂದಿರ ಶಿಲಾನ್ಯಾಸ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸದ ಬಗ್ಗೆ ಚಿಂತನೆ ನಡೆಯುತ್ತಿದೆ. ಇದು ಇಡೀ ಭಾರತದ ದೇವಸ್ಥಾನವಾಗಬೇಕು. ಭಾರತವನ್ನು ಕಟ್ಟಲು ಬಂದಿರುವ ರಾಮದೂತ ಮೋದಿ. ‘ದೈವಂ ಮಾನುಷ ರೂಪೇಣ’ ಎನ್ನುವಂತೆ. ಮನುಷ್ಯನಿಗೆ ಜನಬಲ, ಬುದ್ಧಿಬಲ, ಹಣಬಲ ಇದ್ದರೂ ದೈವಬಲ ಅತಿ ಮುಖ್ಯ. ಮೋದಿಯವರನ್ನು ಬಿಟ್ಟು ಯಾರೇ ಶಿಲಾನ್ಯಾಸ ಮಾಡಿದರೂ ಅಡ್ಡಿ, ಆತಂಕಗಳು ಎದುರಾಗುತ್ತವೆ.

    ರಾಷ್ಟ್ರ ಅಸ್ಥಿರವಿಲ್ಲ: ನ.20ರಿಂದ ರಾಹು ಬದಲಾವಣೆ ಆಗುತ್ತಾನೆ. ಜೂನ್ 29ಕ್ಕೆ ಬುಧ ಬದಲಾವಣೆ ಆಗುತ್ತದೆ. ರಾಜ್ಯ ಸರ್ಕಾರವನ್ನು, ಅದನ್ನು ನಡೆಸುತ್ತಿರುವವರನ್ನು ಅಸ್ಥಿರ ಮಾಡಲು ಯೋಚನೆ ನಡೆಯುತ್ತಿದೆ. ಮುಖ್ಯಮಂತ್ರಿ ಸಂಯಮ ಹೊಂದಿರಬೇಕು. ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ರಾಹು ಹಾಗೂ ಗ್ರಹಣ ಎರಡೂ ಇದಕ್ಕೆ ಪುಷ್ಟಿ ನೀಡಬಹುದು. ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತದೆ. ಅಷ್ಟರಲ್ಲೆ ಸರ್ಕಾರವನ್ನು ಅಸ್ಥಿರ ಮಾಡಿದರೆ ರಾಜ್ಯ ಮತ್ತೆ ರಾಷ್ಟ್ರಪತಿ ಆಳ್ವಿಕೆಗೆ ಹೋಗಿ, ಆಳುತ್ತಿರುವ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ರಾಷ್ಟ್ರಮಟ್ಟದಲ್ಲಿ ಆಳ್ವಿಕೆ ನಡೆಸುತ್ತಿರುವವರಿಗೆ ಯಾವುದೇ ತೊಂದರೆ ಇಲ್ಲ. ಆದರೆ ಅನ್ಯ ಮಾರ್ಗಗಳಿಂದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಹೋಗಬಾರದು. ಇತರ ರಾಜ್ಯಗಳಲ್ಲಿ ಮೊದಲಿನಂತೆ ಸರಾಗವಾಗಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಬಿಹಾರದಲ್ಲಿ ಬಹಳ ಕಷ್ಟವಿದೆ. ಯಾವುದೇ ಪಕ್ಷದ ಮೈತ್ರಿಯಿಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಿದರೆ ರಾಜ್ಯಗಳನ್ನು ಸಂಪಾದನೆ ಮಾಡಬಹುದು.

    ಚೀನಾಕ್ಕೆ ಎಚ್ಚರಿಕೆ ಗಂಟೆ: ಚೀನಾ, ಪಾಕಿಸ್ತಾನ, ನೇಪಾಳ… ಯಾರೇ ಆದರೂ ಈ ತ್ಯಾಗಭೂಮಿಯನ್ನು ಸೋಲಿಸಲು ಸಾಧ್ಯವಿಲ್ಲ. ಯುದ್ಧಭೀತಿ ಪ್ರಚಾರ ಮಾಡುತ್ತಿರುವುದು ಚೀನಾದವರು. ಅಂತಹ ಯುದ್ಧಭೀತಿ ಬಂದೇ ಇಲ್ಲ. ಇದು ಚೀನಾದ ತಂತ್ರ. ಭಾರತಕ್ಕೆ ದ್ರೋಹ ಮಾಡಿದ ನೇಪಾಳಕ್ಕೆ ದೇವರೇ ಶಿಕ್ಷೆ ನೀಡುತ್ತಾನೆ. ವಿಶ್ವದ ಎಲ್ಲ ರಾಷ್ಟ್ರಗಳೂ ಚೀನಾಕ್ಕೆ ಶತ್ರುಗಳಾಗಿದ್ದು, ಅದು ಒಬ್ಬಂಟಿಯಾಗಿದೆ.

    ಗುರಿಯನ್ನು ಮುಟ್ಟಿ, ಗಿರಿಯನ್ನು ಮೆಟ್ಟಿ ನಿಲ್ಲುವ ನರೇಂದ್ರ ಮೋದಿ: ಕಲಿಯುಗದ ಮುಕ್ಕಾಲು ಭಾಗ ಇನ್ನೂ ಬಾಕಿ ಇದೆ. ಕಾಲಕಾಲಕ್ಕೆ ಭೂಮಿಯನ್ನು ಎಚ್ಚರಿಸಬೇಕಾದ್ದು ಧರ್ಮ. ಇದು ತ್ಯಾಗದ ಭೂಮಿ. ಎಷ್ಟೋ ಜನರು ರಾಜ-ಮಹಾರಾಜರು ಧರ್ಮವನ್ನು ಕಾಪಾಡಿ, ಋಷಿಗಳು, ಗಣ್ಯರು, ತಪಸ್ವಿಗಳು, ಯೋಗಶೀಲರನ್ನು ಈ ಭೂಮಿ ಪಡೆದಿದೆ. ಅವರ ಪುಣ್ಯ ನಶಿಸಿ ಹೋಗಿಲ್ಲ. ಬಹುತೇಕ ಆ ಪುಣ್ಯವನ್ನು ದೇವರು ಒಬ್ಬನನ್ನು ಸೃಷ್ಟಿಮಾಡಿ ಆಳುವ ಸಮಯದಲ್ಲಿ ನೀಡುತ್ತಾನೆ. ಪ್ರಧಾನಿಯಾಗಿ ನರೇಂದ್ರ ಮೋದಿ ಆರನೇ ವರ್ಷ ಆಡಳಿತ ನಡೆಸುತ್ತಿದ್ದಾರೆ. ಇಡೀ ವಿಶ್ವವನ್ನೇ ಕರೊನಾ ಸೋಂಕು ಕಾಡುತ್ತಿದೆ. ಚೀನಾದಲ್ಲಿ ಎರಡನೇ ಬಾರಿ ಆರಂಭವಾಗಿದೆ. ಆದರೆ ಭಾರತದಲ್ಲಿ ಕರೊನಾದಿಂದ ಬಹುದೊಡ್ಡ ತೊಂದರೆ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಕ್ರಮಗಳು ಇದಕ್ಕೆ ಕಾರಣ. ಈ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ಸೋಲುಂಡಿದ್ದ ಇಂದಿರಾ ಗಾಂಧಿಯವರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದೆ. ಅವರಿಗೆ ಶಿವ ಪಂಚಾಕ್ಷರಿ ಮಂತ್ರೋಪದೇಶ ಮಾಡಿದ ನಂತರ ಮತ್ತೊಮ್ಮೆ ಪ್ರಧಾನಿಯಾಗಿ ದೇಶ ಆಳಿದರು. ಗಾಣಗಾಪುರದ ಕ್ಷೇತ್ರದಲ್ಲಿ ದತ್ತಾತ್ರೇಯನ ಉಪಾಸಕರು, ಸಂಸಾರಿಗಳೂ ಆಗಿದ್ದ ಅಣ್ಣಾ ಮಹಾರಾಜ್ ದತ್ತಾತ್ರೇಯ ಸ್ವರೂಪಿಗಳೇ ಆಗಿದ್ದರು. ಇಂದಿಗೂ ಭೀಮ ಭಟ್ಟರು, ಅರುಣ ಮಹಾರಾಜರು ಹಾಗೂ ದೀಪಕ್ ಭಟ್ಟರಂತಹ ಅವರ ಅನುಯಾಯಿಗಳಿದ್ದಾರೆ. ‘ತುರ್ತ ಪರಿಸ್ಥಿತಿ ಹೇರಿದವರು 2015ರಲ್ಲಿ ನಶಿಸಿ ಹೋಗುತ್ತಾರೆ’ ಎಂದು 72ನೇ ಇಸವಿ ಆಸುಪಾಸಿನಲ್ಲಿ ಅಟಲ್ ಬಿಹಾರಿ ವಾಜಪೇಯಿಗೆ ಅಣ್ಣಾ ಮಹಾರಾಜರು ತಿಳಿಸಿದ್ದರು. ಅಂತೆಯೇ ಮೋದಿ ಪ್ರಧಾನಿ ಆಗಿದ್ದಾರೆ. ಅವರ ಒಂದೇ ಕರೆಗೆ ದೇಶದ ಜನರು ಸ್ಪಂದಿಸುತ್ತಾರೆ. ಆರನೇ ಮನೆಯ ಗ್ರಹಣದಿಂದಾಗಿ ಮೋದಿ ಮೇಲಿನ ಒತ್ತಡ ಹೆಚ್ಚಾಗುತ್ತದೆ, ಆರೋಗ್ಯ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರಬಹುದು, ಈ ತೊಂದರೆ ಗಳಿಂದ ಪಾರಾಗಲು ಗಾಣಗಾಪುರಕ್ಕೆ ಭೇಟಿ ನೀಡಬೇಕು. ನಂತರದಲ್ಲಿ ಭೂಮಿಯಲ್ಲಿ ಯಾವುದೇ ಶಕ್ತಿ ಮೋದಿಯವರನ್ನು ಸೋಲಿಸಲು ಸಾಧ್ಯವಿಲ್ಲ.

    ರಾಜ್ಯದಲ್ಲಿ ವರ್ಚಸ್ಸು ವೃದ್ಧಿ ಮಾಡಬೇಕು: ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಅನೇಕರಿದ್ದಾರೆ. ಅಂಥವರನ್ನು ಬದಲು ಮಾಡಿ, ಪ್ರಾಮಾಣಿಕರು, ಯುವಕರಿಗೆ ಅವಕಾಶ ನೀಡಬೇಕು. ಯಡಿಯೂರಪ್ಪ ಧೈರ್ಯವಾಗಿ ಮುನ್ನುಗ್ಗಿ, ಅವಕಾಶ ಸಿಕ್ಕಿಲ್ಲದವರಿಗೆ ಕ್ಯಾಬಿನೆಟ್​ನಲ್ಲಿ ಅವಕಾಶ ನೀಡಬೇಕು. ಈಗ ಸರ್ಕಾರಕ್ಕೆ ಅಷ್ಟು ಒಳ್ಳೆಯ ಇಮೇಜ್ ಇಲ್ಲ. ಪ್ರಾಮಾಣಿಕರನ್ನು ಒಳ್ಳೆಯ ಸ್ಥಾನದಲ್ಲಿ ಕೂರಿಸಬೇಕು. ಐಪಿಎಸ್, ಐಎಎಸ್​ನಲ್ಲಿನ ತಲಾ ಶೇಕಡ 33ರಷ್ಟು ಪ್ರಾಮಾಣಿಕರನ್ನು ಸೂಕ್ತ ಸ್ಥಾನದಲ್ಲಿ ನೇಮಿಸಿಕೊಂಡರೆ ಸಾಕು, ಸರ್ಕಾರದ ವರ್ಚಸ್ಸು ಬದಲಾಗುತ್ತದೆ. ಬುಧ, ರಾಹು, ಸೂರ್ಯ ಒಂದೇ ಮನೆಯಲ್ಲಿ ಇರುತ್ತಾರೆ. ಸೆಪ್ಟೆಂಬರ್​ನಲ್ಲಿ ಕೇಂದ್ರ ಸರ್ಕಾರದಲ್ಲಿ ಮಂತ್ರಿ ಮಂಡಲ ಬದಲಾವಣೆ ಆಗುತ್ತದೆ. ಆರ್ಥಿಕ ಇಲಾಖೆಗೆ ಬ್ಯಾಂಕರ್ ಒಬ್ಬರು ನೇತೃತ್ವ ವಹಿಸುವ ಸಾಧ್ಯತೆ ಇದೆ. ರಕ್ಷಣಾ ಇಲಾಖೆಯೂ ಬದಲಾವಣೆ ಆಗಿ, ಸಮಗ್ರ ಬದಲಾವಣೆ ಆಗಬಹುದು.

    ರಾಶಿಗಳ ಫಲಾಫಲ: ಮೇಷ, ಮಕರ, ಸಿಂಹ, ಕನ್ಯಾಕ್ಕೆ ಒಳ್ಳೆಯ ಫಲ. ವೃಷಭ, ತುಲಾ ಧನಸ್ಸು, ಕುಂಭಕ್ಕೆ ಮಧ್ಯಮ ಫಲ ಇದೆ. ಮಿಥುನ, ಕರ್ಕಾಟಕ, ವೃಶ್ಚಿಕ, ಮೀನ ರಾಶಿಗೆ ಒಳ್ಳೆಯ ಸಮಯವಲ್ಲ. ಅವರವರ ಮನೆ, ಗುರುಗಳ ಸಂಪ್ರದಾಯದಂತೆ ಅನುಷ್ಠಾನ, ಜಪ ತಪ ಮಾಡಿಕೊಂಡು ಅನಿಷ್ಠ ಕಳೆದುಕೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts