ಧರ್ಮದಲ್ಲಿ ಅಧರ್ಮ ಕೂಡಿದರೆ ಸಮಾಜ ಹಾಳು:ಹೈಕೋರ್ಟ್​ ನ್ಯಾ.ರಾಮಚಂದ್ರ ಡಿ.ಹುದ್ದಾರ್​ ಅಭಿಮತ

ramanavami
Published on

ಬೆಂಗಳೂರು: ರಾಮನ ಆದರ್ಶವನ್ನು ನಾವೆಲ್ಲರೂ ಪಾಲಿಸಿದರೆ ಸಮಾಜ ಸುಧಾರಣೆಯಾಗುತ್ತದೆ ಎಂದು ಹೈಕೋರ್ಟ್​ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್​ ಅಭಿಪ್ರಾಯಪಟ್ಟರು.

ಶ್ರೀ ರಾಮಸೇವಾ ಮಂಡಳಿ, ರಾಮನವಮಿ ಸೆಲೆಬ್ರೇಷನ್​ ಟ್ರಸ್ಟ್​, ಭಾನುವಾರ ಚಾಮರಾಜಪೇಟೆಯ ಓಲ್ಡ್​ ಪೋರ್ಟ್​ ಹೈಸ್ಕೂಲ್​ ಮೈದಾನದಲ್ಲಿ ಆಯೋಜಿಸಿದ್ದ "ರಾಮನವಮಿ ಜಾಗತಿಕ ಸಂಗೀತ ಉತ್ಸವ ಹಾಗೂ "ಎಸ್ಸೆಂ ಕೃಷ್ಣ ಮೆಮೋರಿಯಲ್​ ರಾಷ್ಟ್ರೀಯ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಧರ್ಮ ಇರುವ ಕಡೆ ನ್ಯಾಯ ಇರುತ್ತದೆ. ಧರ್ಮದಲ್ಲಿ ಅಧರ್ಮ ಕೂಡಿದರೆ ಸಮಾಜ ಹಾಳಾಗಲಿದೆ.ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸ್ವಾರ್ಥ, ಜಗಳ, ದ್ವೇಷ ಹೆಚ್ಚಾಗುತ್ತಿದೆ. ಮನುಷ್ಯನ ಜೀವನ ಅಪರೂಪವಾದ ಹಿನ್ನೆಲೆಯಲ್ಲಿ ರಾಮರಕ್ಷೆ ಮಹತ್ವದ ಬಗ್ಗೆ ನಾವೆಲ್ಲರೂ ಅರಿಯಬೇಕು. ಪ್ರತಿಯೊಬ್ಬ ಮನುಷ್ಯ ಆದರ್ಶವಾಗುವ ಮೂಲಕ ಸಮಾಜದ ಸುಧಾರಣೆಗೆ ತಮ್ಮ ಜೀವನವನ್ನು ಮುಡುಪು ಇಡಬೇಕೆಂದು ಸಲಹೆ ನೀಡಿದರು.

ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದ ಜನರಿಗೆ ವಿದೇಶದ ಸಂಸ್ಕೃತಿಯನ್ನು ವಿವಿಧ ಮೂಲಗಳಿಂದ ಹೇರಲಾಗುತ್ತದೆ. ದೇವರ ಬಗ್ಗೆಯೂ ಜನರ ಒಲವು ಕಡಿಮೆಯಾಗುತ್ತದೆ.ಪಾಲಕರು ತಮ್ಮ ಮಕ್ಕಳಿಗೆ ಪ್ರತಿ ನಿತ್ಯ ರಾಮರಕ್ಷೆ ಪಠಣೆ ಮಾಡಬೇಕು. ಸತತವಾಗಿ ಆಚರಿಸಿಕೊಂಡು ಬರುತ್ತಿರುವ ರಾಮನವಮಿ ಆಚರಣೆ ಶ್ಲಾಘನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರದಾನ:ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ವಿದ್ವಾನ್​ ಸಂದೀಪ್​ ನಾರಾಯಣ್​ಗೆ ಎಸ್ಸೆಂ ಕೃಷ್ಣ ಮೆಮೋರಿಯಲ್​ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪ್ರಶಸ್ತಿ ಮೊತ್ತ 1 ಲಕ್ಷ ರೂ.ನಗದು, ತಾಂಬೂಲ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಬಳಿಕ ನಡೆದ ಸಂಗೀತ ಉತ್ಸವದಲ್ಲಿ ನೂರಾರು ಜನರು ಸಂಗೀತವನ್ನು ಆಲಿಸಿ ಖುಷಿಪಟ್ಟರು.

ರಾಮನವಮಿ ಸಂಗೀತ ಉತ್ಸವ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದೆ. ಈ ಕಾರ್ಯಕ್ರಮವನ್ನು ನನ್ನ ಪತಿ ತುಂಬ ಇಷ್ಟಪಡುತ್ತಿದ್ದರು.ಪ್ರತಿ ವರ್ಷ ತಪ್ಪದೆ ಭಾಗಿಯಾಗಿ ಸಂಗೀತವನ್ನು ಆಲಿಸುತ್ತಿದ್ದರು.

| ಪ್ರೇಮಾ ಕೃಷ್ಣ, ಮಾಜಿ ಸಿಎಂ ಎಸ್ಸೆಂ ಕೃಷ್ಣ ಪತ್ನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net