ರಾಜ್ಯದಲ್ಲಿ ವಾರ ಪೂರ್ತಿ ವರ್ಷಧಾರೆ:ಹವಾಮಾನ ಇಲಾಖೆ ಮಾಹಿತಿ

Good rainfall in the district Mandya
Published on

ಬೆಂಗಳೂರು: ಬಂಗಾಳಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ತೇವಾಂಶ ಭರಿತ ಮೋಡಗಳಿರುವ ಕಾರಣದಿಂದ ರಾಜ್ಯದಲ್ಲಿ ಮಳೆ ಮುಂದುವರಿದಿದ್ದು, ಚಾಮರಾಜನಗರ, ಮೈಸೂರು ಸೇರಿ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಕೆಲವೆಡೆ ಭಾನುವಾರ ಬಿರುಸಾಗಿ ವರ್ಷಧಾರೆಯಾಗಿದೆ. ಅಲ್ಲದೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ವಾರ ಪೂರ್ತಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಕೊಡಗು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಏ.7ರಿಂದ ಏ.13ರವರೆಗೆ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗದಲ್ಲಿ ಮುಂದಿನಮೂರು ದಿನ ಹಾಗೂ ಕೊಪ್ಪಳ,ವಿಜಯಪುರ, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ದಾವಣಗೆರೆ, ಕೋಲಾರ,ಮಂಡ್ಯ,ರಾಮನಗರದಲ್ಲಿ ಏ.7ರಂದು ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ಈ ವೇಳೆ ಮಳೆಯ ಜೊತೆಗೆ ರಭಸದಿಂದ ಗಾಳಿ ಬೀಸುವ ಸಾಧ್ಯತೆ ಇದೆ.

40 ಡಿ.ಸೆ.ದಾಟದ ಉಷ್ಣಾಂಶ:ರಾಜ್ಯದಲ್ಲಿ ಮೋಡ ಕವಿದ ವಾತಾವರಣ, ಮಳೆ ಸುರಿಯುತ್ತಿರುವ ಪರಿಣಾಮ 40 ಡಿ.ಸೆ. ದಾಟಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 43-44 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಆದರೆ, ಈ ಬಾರಿ ಒಂದೆರೆದು ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಆ ಭಾಗದಲ್ಲಿ 37-38 ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲೂ 34-36 ಡಿ. ಸೆ.ದಾಖಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net