ಹಾವು ಕಂಡರೆ ಆಟವಾಡುತ್ತಿದ್ದವ ದುರ್ಮರಣಕ್ಕೀಡಾದ! ಬೆಚ್ಚಿಬೀಳಿಸುತ್ತೆ ಭಯಾನಕ ದೃಶ್ಯ

death
Published on

ಹುಬ್ಬಳ್ಳಿ: 'ಹಾವು...' ಎಂಬ ಹೆಸರು ಕೇಳಿದ್ರೆ ಸಾಕು ಹಲವರು ಬೆಚ್ಚಿಬೀಳ್ತಾರೆ. ಇನ್ನು ಪ್ರತ್ಯಕ್ಷವಾಗಿ ಹಾವುನ್ನು ಕಂಡರೆ ಮಾರುದ್ದ ಓಡಿಹೋಗ್ತಾರೆ. ಅಂತಹದ್ದರಲ್ಲಿ ಇಲ್ಲೊಬ್ಬ ಭೂಪ ಎಲ್ಲೇ ಹಾವು ಕಂಡರೂ ಅದನ್ನು ಹಿಡಿದು ಚೆಲ್ಲಾಟವಾಡುತ್ತಿದ್ದ. ಕೊನೆಗೇ ಆ ಹಾವಿನಿಂದಲೇ ಪ್ರಾಣಬಿಟ್ಟಿದ್ದಾನೆ. ಸಾಯುವ ಮುನ್ನ ಆ ಹಾವನ್ನೂ ಕೊಂದಿದ್ದಾನೆ.

ಹೌದು ಇಂತಹದ್ದೊಂದು ವಿಚಿತ್ರ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಸಿದ್ದಪ್ಪ ತಳವಾರಗೆ ಹಾವುಗಳೊಂದಿಗೆ ಚೆಲ್ಲಾಟವಾಡುವ ಹುಚ್ಚಿತ್ತು. ಹಾವುಗಳು ಎಲ್ಲೇ ಕಂಡರೂ ಅವುಗಳ ಜತೆ ಆಟವಾಡುತ್ತಿದ್ದ.

ಬುಧವಾರ ಕೂಡ ಗ್ರಾಮದಲ್ಲಿ ಹಾವೊಂದು ಕಾಣಿಸಿಕೊಂಡಿತ್ತು. ಹಾವು ಕಂಡರೆ ಭಯವಿಲ್ಲ ಎಂದು ಬೀಗುತ್ತಿದ್ದ ಸಿದ್ದಪ್ಪ ತಳವಾರ, ಊರಲ್ಲಿ ಕಾಣಿಸಿಕೊಂಡ ಹಾವನ್ನು ಆಟವಾಡಿಸಲು ಹೋಗಿದ್ದ. ರೊಚ್ಚಿಗೆದ್ದ ಹಾವು ಸಿದ್ದಪ್ಪನನ್ನು ಕಚ್ಚಿದೆ. ಇದರಿಂದ ಸಿಟ್ಟಾದ ಸಿದ್ದಪ್ಪ, ಆ ಹಾವನ್ನು ತಾನೇ ಕೊಂದು ಹಾಕಿದ. ಅಷ್ಟರಲ್ಲಿ ಹಾವಿನ ವಿಷ ದೇಹಕ್ಕೆ ಹರಡಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದ.

ಒಂದೆಡೆ ಹಾವು, ಮತ್ತೊಂದೆಡೆ ಸಿದ್ದಪ್ಪ ಶವವಾಗಿ ಬಿದ್ದಿದ್ದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಲಘಟಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net