ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಅಗತ್ಯವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯ

Aaraga Jnanendra
Published on

ಬೆಂಗಳೂರು: ಗೃಹ ಸಚಿವನಾಗಿ ನಾನು ಹೇಗೆ ಕೆಲಸ ಮಾಡಬೇಕು, ಮಾಡುತ್ತಿರುವ ಬಗೆ, ಜವಾಬ್ದಾರಿ ನಿರ್ವಹಣೆ ಕುರಿತು ಪ್ರತಿಪಕ್ಷ ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದರು.

ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಹೋಮ್ ಮಿನಿಸ್ಟರ್ ಯೂಸ್ ಲೆಸ್ ಫೆಲೋ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರತಿಪಕ್ಷ ನಾಯಕ ಕೆಲವೊಮ್ಮೆ ಇಂತಹ ಪದಗಳನ್ನು ಬಳಸುತ್ತಾರೆ. ಮುಖ್ಯಮಂತ್ರಿಯಾಗಿದ್ದವರು ಅಂತಹ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಸತ್ಯಾಂಶ ಪರಿಶೀಲನೆ

ಪಿಎಸ್ ಐ ನೇಮಕ ಪರೀಕ್ಷಾ ಅಕ್ರಮದ ಆರೋಪಿ ಆರ್.ಡಿ.ಪಾಟೀಲ್ ಅವರ ಬಳಿ ಸಿಐಡಿ ತನಿಖಾಧಿಕಾರಿ ಮೂರು ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟ ವಿಡಿಯೋದ ಸತ್ಯಾಂಶ ಪರಿಶೀಲಿಸಲಾಗುವುದು ಎಂದರು. ಒಬ್ಬ ಆರೋಪಿ ಹೇಳಿಕೆಯನ್ನು ಎಷ್ಟರಮಟ್ಟಿಗೆ ನಂಬಬಹುದು ಎನ್ನುವುದು ಪ್ರಶ್ನಾರ್ಹ. ಸಿಐಡಿ ಅಧಿಕಾರಿ ಅಥವಾ ಐಪಿಎಸ್ ಅಧಿಕಾರಿಯಿರಲಿ ಲೋಪ ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು ಎಂದು ಹೇಳಿದರು.

ಬಿಜೆಪಿ ಕಾಲದವನಲ್ಲ

ಸ್ಯಾಂಟ್ರೋ ರವಿ ಬಿಜೆಪಿ ಆಡಳಿದಲ್ಲಿ ಹುಟ್ಟಿಕೊಂಡಿಲ್ಲ. ಕಳೆದ 20 ವರ್ಷಗಳಿಂದ ಕಾಂಗ್ರೆಸ್, ಜೆಡಿಎಸ್ ನವರು ಪೋಷಿಸಿದ್ದಾರೆ. ಅಂತಹವರು ಕೆಲ ಸಂಪರ್ಕದಲ್ಲಿದ್ದಾರೆ ಎಂದು ಎಚ್ ಡಿಕೆ ಹೇಳಿಕೆಯನ್ನು ಗಮನಿಸಿರುವೆ. ಸಮಾಜದಲ್ಲಿ ಅಂತಹವರು ಇರಬಹುದು. ಆದರೆ ಈ ಸರ್ಕಾರದಲ್ಲಿಲ್ಲ. ಕುಮಾರಸ್ವಾಮಿ ಬೆಳೆಸಿದವರು, ಕಾಂಗ್ರೆಸ್​ನವರು ಬೆಳೆಸಿದವರು ಇರಬಹುದು ಎಂದು ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ತುಮಕೂರಿಗೆ ಭೇಟಿ ನೀಡುವರು ಎಂದಿದೆ.ಇನ್ನೂ ಅಂತಿಮವಾಗಿಲ್ಲ.ಪ್ರಧಾನಿ ಮೋದಿ, ಅಮಿತ್ ಷಾ ಸೇರಿ ರಾಷ್ಟ್ರೀಯ ನಾಯಕರು ರಾಜ್ಯದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬರಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net