ಸ್ವಲ್ಪ ದಿನದಲ್ಲೇ ನಮ್ಮ ಹೆಸರು ಕೂಡ ಹೇಳ್ತಾರೆ! ಭಾರೀ ಸಂಚಲನ ಮೂಡಿಸಿದ ಭವಾನಿ ರೇವಣ್ಣ ಹೇಳಿಕೆ

Bhavani Revanna
Published on

ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಸಚಿವ ಎಚ್​.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ನೀಡಿರುವ ಹೇಳಿಕೆ ಹಾಸನ ರಾಜಕೀಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಹಾಸನ ವಿಧಾನಸಭಾ ಕ್ಷೇತ್ರದಿಂದ ದೊಡ್ಡಗೌಡರ ಸೊಸೆ ಕಣಕ್ಕಿಳಿಯುವ ಸುಳಿವು ಸಿಕ್ಕಿದೆ.

ಹಾಸನ ತಾಲ್ಲೂಕಿನ ಕಕ್ಕೇನಹಳ್ಳಿ ಗ್ರಾಮದಲ್ಲಿ ನಡೆದ ಅಣ್ಣಪ್ಪಸ್ವಾಮಿ ದೇವಾಲಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಭವಾನಿ ರೇವಣ್ಣ, ಬೇರೆ ಎಲ್ಲಿ ಬೇಕಾದ್ರು ಜಾತಿ-ಭೇದ ಮಾಡಲಿ, ನಮಗೆ ಅದರ ಗಂಧವೇ ಗೊತ್ತಿಲ್ಲ ಅನ್ನುವ ರೀತಿ ಕುಳಿತಿರುವ ಮುಸ್ಲಿಂ ಬಾಂಧವರಿಗೆ ವಿಶೇಷವಾಗಿ ವಂದನೆ ಸಲ್ಲಿಸುತ್ತೇನೆ ಎಂದು ಮಾತು ಆರಂಭಿಸಿದರು.

ರೇವಣ್ಣ ಅವರು ಇಂಧನ ಮಂತ್ರಿಯಾಗಿದ್ದಾಗ ಅನುಕೂಲ ಮಾಡಿಕೊಟ್ಟಿದ್ದಾರೆ ಅಂತಾ ಈಗ ಗೊತ್ತಾಯಿತು. ಅವರು ಮಂತ್ರಿಯಾಗಿದ್ದಾಗ ಇಡೀ ಜಿಲ್ಲೆಯ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ. ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ಬಿಜೆಪಿ ಕ್ಷೇತ್ರವಾದ್ದರಿಂದ ಕೆಲವು ಕೆಲಸ, ಕಾರ್ಯಗಳು ಉಳಿದುಕೊಂಡಿವೆ. ಇನ್ನೇನು 90 ದಿನಗಳಲ್ಲಿ ನಮ್ಮ‌ ಚುನಾವಣೆ ಮುಗಿದು ಹೋಗಿರುತ್ತೆ. ಈ ಬಾರಿ ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ಕೂಡ ಮಾತನಾಡಿಕೊಂಡು, ನಿರ್ಣಯ ತೆಗೆದುಕೊಂದ್ದಾರೆ. ಇನ್ನು ಸ್ವಲ್ಪ ದಿವಸದಲ್ಲೇ ನಮ್ಮ ಹೆಸರು ಕೂಡ ಹೇಳ್ತಾರೆ. ಹಾಗಾಗಿ ಊರೂರುಗಳಲ್ಲಿ ನನಗೆ ಜನ ಹಾಗೂ ಊರಿನ ಪರಿಚಯ ಇದ್ರೆ ನನಗೂ ಕೂಡ ಒಳ್ಳೆಯದು. ಮುಂದಿನ ದಿನಗಳಲ್ಲಿ ಕೆಲಸ ಮಾಡಲು ಭಗವಂತ ಆಶೀರ್ವಾದ ಮಾಡಲಿ ಅಂತ ಭಗವಂತನಲ್ಲಿ ಬೇಡಿದ್ದೇನೆ ಎನ್ನುವ ಮೂಲಕ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದರು.

ನಾನು ಅರ್ಜೆಂಟಾಗಿ ಹೋಗಬೇಕಿರುವುದರಿಂದ ಜಾಸ್ತಿ ಏನು ಮಾತನಾಡುವುದಿಲ್ಲ. ಮತ್ತೊಮ್ಮೆ ಈ ಊರಿಗೆ ನಾನು ಬರ್ತಿನಿ, ನಮ್ಮ ಗ್ರಾಮಸ್ಥರನ್ನೆಲ್ಲಾ ಭೇಟಿ ಮಾಡ್ತಿನಿ ಎಂದು ಮಾತು ಮುಗಿಸಿದರು. ಭವಾನಿ ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net