ಕ್ಲಿನಿಕ್​ನಲ್ಲಿ ನರ್ಸ್​-ಡಾಕ್ಟರ್​ ಲವ್​! ನಂಬಿಸಿ ಮದ್ವೆಯಾದ ಬಳಿಕ ನಡು ನೀರಲ್ಲಿ ಕೈಬಿಟ್ಟ ಪತಿಗಾಗಿ ಕಣ್ಣೀರಿಟ್ಟ ಪತ್ನಿ

Vijayanagara Woman
Published on

ವಿಜಯನಗರ: ಪ್ರೀತಿಸಿ, ನಂಬಿಸಿ ಮದುವೆಯಾದ ಬಳಿಕ ನಡು ನೀರಲ್ಲಿ ಕೈಬಿಟ್ಟ ಪತಿರಾಯನಿಗಾಗಿ ಪತ್ನಿ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ವಿಜನಗರದಲ್ಲಿ ಬೆಳಕಿಗೆ ಬಂದಿದೆ.

ತ್ರಿವೇಣಿ ಎಂಬಾಕೆ ವೈದ್ಯ ಗಿರೀಶ್​ ಅವರ ಕ್ಲಿನಿಕ್​ನಲ್ಲಿ ನರ್ಸ್ ಆಗಿದ್ದಳು. ಆಕೆಯನ್ನು ಪ್ರೀತಿಸಿ, ಇಷ್ಟಪಟ್ಟು ಗಿರೀಶ್​ ಮದುವೆಯಾಗಿದ್ದಾರಂತೆ. ಒಂದು ಮಗು ಇದೆ. ಆದರೀಗ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಎಂಎಸ್ ವೈದ್ಯ ಗಿರೀಶ್​ ಹಾಗೂ ಅವರ ಕುಟುಂಬದ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ತ್ರಿವೇಣಿ, ನನಗೆ ನನ್ನ ಗಂಡ ಬೇಕು ಅಂತಾ ಕಣ್ಣೀರಿಟ್ಟಿದ್ದಾರೆ. ಬೇರೆ ಜಾತಿಯ ಮದುವೆ ಆಗಿದ್ದಕ್ಕೆ ವೈದ್ಯರ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ನಿರತಂರ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ತ್ರಿವೇಣಿ ಆರೋಪ ಮಾಡಿದ್ದಾರೆ.

ಕಳೆದ ಆರೇಳು ವರ್ಷದ ಹಿಂದೆ ತ್ರಿವೇಣಿ ಮತ್ತು ಗಿರೀಶ್​ ಅಂತರ್ಜಾತಿ ವಿವಾಹ ಆಗಿದ್ದಾರೆ. ಮನೆಯಲ್ಲಿ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಹಲವಾಗಲು ಪೊಲೀಸ್ ಠಾಣೆಗೆ ತ್ರಿವೇಣಿ ದೂರು ದಾಖಲಿಸಿದ್ದರು. ಆದರೆ, ನ್ಯಾಯ ಸಿಗದಿದ್ದಕ್ಕೆ ಮಗುವಿನ ಸಮೇತ ವಿಜಯನಗರ ಎಸ್.ಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ತ್ರಿವೇಣಿಯವರ ನೋವನ್ನು ಆಲಿಸಿದ ಎಸ್ಪಿ ಶ್ರೀಹರಿಬಾಬು ಕೂಲಂಕುಷವಾಗಿ ಪರಿಶೀಲಿಸಿ FIR ದಾಖಲಿಸುವಂತೆ ಹಲವಾಗಲು ಪಿಎಸ್ಐಗೆ ಸೂಚನೆ ನೀಡಿದ್ದಾರೆ.

ಎಸ್ಪಿ ಸೂಚನೆ ಮೇರೆಗೆ ಇದೀಗ ವೈದ್ಯ ಗಿರೀಶ್ ಜಾಗೂ ಕುಟುಂಬಸ್ಥರ ಮೇಲೆ FIR ದಾಖಲಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ವೈದ್ಯ ಗಿರೀಶ್ ಮತ್ತು ಆತನ ಇಡೀ ಕುಟುಂಬ ನಾಪತ್ತೆಯಾಗಿದೆ. ಅವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net