

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರದ ಜನರ ಮನಸ್ಸಿನಲ್ಲಿ ಛಾಪು ಮೂಡಿಸಿದ್ದ ಹೋಟೆಲ್ ಶಿವಪ್ರಸಾದ್ ಜನರ ಆಶಯದಂತೆ ಹಾಗೂ ಹಿಂದಿನ ವೈಭವಕ್ಕೆ ತಕ್ಕಂತೆ ಮುನ್ನಡೆಸುವ ಇಚ್ಛೆಯೊಂದಿಗೆ ಮಾ.9ರಿಂದ ಮರುಆರಂಭಗೊಳ್ಳಲಿದೆ.
ಕುಂದಾಪುರದ ಶಿವಪ್ರಸಾದ್ ಗ್ರಾಂಡ್‌ನ ಕಟ್ಟಡದಲ್ಲಿ ಸ್ವಂತ ಆಡಳಿತದೊಂದಿಗೆ ಶಿವಪ್ರಸಾದ್ ಹೋಟೆಲ್ ಪುನಃ ಆರಂಭವಾಗುತ್ತಿದ್ದು, ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಆಹಾರ ಲಭ್ಯವಿರಲಿದೆ. ಮೊದಲಿದ್ದ ಶಿವಪ್ರಸಾದ್ ಹೋಟೆಲ್ ಶಾಲಾ ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಪ್ರಿಯವಾಗಿದ್ದು, ಇಲ್ಲಿನ ಊಟ ತಿಂಡಿಯ ರುಚಿಗೆ ಮಾರುಹೋಗಿ ಬೇರೆ ಜಿಲ್ಲೆಯವರೂ ಆಗಮಿಸುತ್ತಿದ್ದರು. ಹೋಟೆಲ್ ಮುಚ್ಚಿದ್ದರೂ ಇಂದಿಗೂ ಗ್ರಾಹಕರ ಬಾಯಲ್ಲಿ ಶಿವಪ್ರಸಾದ್ ಹೋಟೆಲ್‌ನ ತಿನಿಸುಗಳ ರುಚಿ ಅಚ್ಚೊತ್ತಿವೆ. ಕುಂದಾಪುರದ ಶಾಸ್ತ್ರಿ ವೃತ್ತದ ಹತ್ತಿರ ಇದ್ದ ಶಿವಪ್ರಸಾದ್ ಹೋಟೆಲ್ ಹೊಸ ಹಾಗೂ ಸ್ವಂತ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಮುಚ್ಚಲಾಗಿದ್ದು, ಹಲವು ವರ್ಷಗಳೇ ಉರುಳಿದರೂ ಹೋಟೆಲ್‌ನ ಬೇಡಿಕೆ ಹಾಗೂ ವರ್ಚಸ್ಸು ಇನ್ನೂ ಕುಂದಿಲ್ಲ. ಗ್ರಾಹಕರ ಸಂತೋಷ ಕಾಯ್ದುಕೊಳ್ಳಲು ಮತ್ತೊಮ್ಮೆ ಹೋಟೆಲ್ ಶಿವಪ್ರಸಾದ್ ಮರುಆರಂಭಗೊಳ್ಳುತ್ತಿದೆ.
ಇಲ್ಲಿ ಶುಚಿ, ರುಚಿ ಆಹಾರ ಮಾತ್ರವಲ್ಲದೇ ನಗುಮೊಗದ ಸೇವೆ, ಮೇಲ್ವಿಚಾರಣೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಿಕೆಯೂ ಗ್ರಾಹಕರ ಮನಸ್ಸನ್ನು ಸೆಳೆದಿದೆ. ಜತೆಗೆ ನುರಿತ ಬಾಣಸಿಗರ ತಂಡವೇ ಕಾರ್ಯನಿರ್ವಹಿಸುತ್ತಿದ್ದು, ಬೆಳಗ್ಗಿನ ತಿಂಡಿ, ಮಧ್ಯಾಹ್ನ ಸರಳ ಊಟ ಹಾಗೂ ಸಂಜೆಯ ತಿನಿಸುಗಳ ರುಚಿ ಗ್ರಾಹಕರ ಬಾಯಲ್ಲಿ ಅಚ್ಚೊತ್ತಿವೆ.
ಮುನ್ಸಿಫರು ಎಂದು ಕರೆಯಲ್ಪಡುತ್ತಿದ್ದ ವಿ.ಕೆ.ಶೆಟ್ಟಿ ಅವರು ಕುಂದಾಪುರ ಅಭಿವೃದ್ಧಿಯ ಕನಸು ಹೊತ್ತವರಾಗಿ 1962ರಲ್ಲಿ ನರಿಬೇಣ ಬಳಿ ಹೋಟೆಲ್ ಶಿವಪ್ರಸಾದ ಆರಂಭಿಸಿದರು. ಕುಂದಾಪುರದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರಿಗೆ ಭಾರಿ ಅನುಕೂಲವಾಗಿದ್ದು, ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಹೋಟೆಲ್‌ನತ್ತ ಆಕರ್ಷಿತಗೊಂಡರು. ನಂತರ ಅರುಣ್‌ಕುಮಾರ್ ಶೆಟ್ಟಿ ಅವರು ಕಟ್ಟಡ ಹಾಗೂ ವ್ಯವಸ್ಥೆಗಳನ್ನು ಆಧುನಿಕರಣಗೊಳಿ ಹೋಟೆಲ್‌ಗೆ ಮತ್ತಷ್ಟು ಮೆರುಗು ನೀಡಿದರು. ಇದೀಗ ಹೊಸ ಹಾಗೂ ಸ್ವಂತ ಕಟ್ಟಡದಲ್ಲಿ ಹೋಟೆಲ್ ಶಿವಪ್ರಸಾದ್ ಇನ್ನುಮುಂದೆ ಗ್ರಾಹಕರ ಸೇವೆಗೆ ಲಭ್ಯವಿರಲಿದೆ.