ಕೆಪಿಎಸ್ ಹೊಸನಗರ ತಾಲೂಕು ನಗರ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆ ಕೆಪಿಎಸ್‌ಗೆ ಆಯ್ಕೆಯಾಗಿದ್ದು ನೂತನ ನಾಮಫಲಕ ಅಳವಡಿಸಿ ಸಂಭ್ರಮಿಸಲಾಯಿತು. ಡಾ. ಜಿ.ಸುಧಾಕರ್, ರಾಜೇಶ ಹಿರೀಮನೆ, ಚಂದ್ರ, ರಮೇಶ, ಅಶ್ವಿನಿ ರಮೇಶ್ ಇತರರಿದ್ದರು.
ಹೊಸನಗರ: ನಗರ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್)ಗೆ ಆಯ್ಕೆ ಆಗಿದ್ದು ಶಾಲಾಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮುಖ್ಯ ಹೆದ್ದಾರಿಯಲ್ಲಿದ್ದ ಸರ್ಕಾರಿ ಪ್ರೌಢಶಾಲೆ ನಗರ ಸ್ವಾಗತ ಕಮಾನನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತಿಸಿ ನಾಮಫಲಕ ಅಳವಡಿಸಲಾಯಿತು. ಶಾಲಾ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಹಲಸಿನಳ್ಳಿ ಮಾತನಾಡಿ, ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಹಿಂದೆ ಶಾಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಈ ಶಾಲೆಗೆ ಕೆಪಿಎಸ್ ಸೌಲಭ್ಯ ನೀಡುವ ಭರವಸೆ ನೀಡಿದ್ದು ಇದೀಗ ಈಡೇರಿದೆ. ಇದಕ್ಕೆ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಸಹಕರಿಸಿದ್ದಾರೆ ಎಂದರು.
ನಗರ ಸರ್ಕಾರಿ ಪ್ರೌಢಶಾಲೆ ಕೆಪಿಎಸ್‌ಗೆ ಆಯ್ಕೆಯಾದ ನಂತರ ಬಿಇಒ ವೈ.ಗಣೇಶ ನೇತೃತ್ವದಲ್ಲಿ ನಗರ ಬಾಲಕ, ಬಾಲಕಿಯರ ಶಾಲೆ, ನೂಲಿಗ್ಗೇರಿ, ಬೈಸೆ ಸೇರಿದಂತೆ ವಿವಿಧ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಮುಖ್ಯ ಶಿಕ್ಷಕರು, ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಕೆಪಿಎಸ್ ಶಾಲೆಗೆ ನಗರ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆ ಸೂಕ್ತ ಎಂದು ತೀರ್ಮಾನಿಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಬಳಿಕ ಶಾಲೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಾಮಫಲಕ ಅಳವಡಿಸಲು ತೀರ್ಮಾನಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಡಾ.ಜಿ.ಸುಧಾಕರ್, ಎಸ್‌ಡಿಎಂಸಿ ಅಧ್ಯಕ್ಷರಾದ ರಾಜೇಶ ಹಿರೀಮನೆ, ಚಂದ್ರ, ರಮೇಶ, ಉಪಾಧ್ಯಕ್ಷೆ ಅಶ್ವಿನಿ ರಮೇಶ್, ಪ್ರಮುಖರಾದ ಕುಮಾರ ಭಟ್, ಪಾಂಡುರಂಗ ಗೌಡ, ಅಬುಬಕರ್, ನಾಗೇಂದ್ರ ಉಪಸ್ಥಿತರಿದ್ದರು.