ಆಯನೂರು: ಸರ್ಕಾರದ ಅವೈಜ್ಞಾನಿಕ ಕ್ರಮದಿಂದ ಆಯನೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ವರ್ಗಾಯಿಸಲಾಗಿದ್ದು ಸ್ಥಳೀಯರಿಗೆ ತೀವ್ರ ಸಮಸ್ಯೆ ಎದುರಾಗಿದೆ.
30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರ ಸುತ್ತಲಿನ 72 ಗ್ರಾಮಗಳ ಜನರಿಗೆ ಸೇವೆ ಒದಗಿಸುತ್ತಿತ್ತು. ಇತ್ತೀಚೆಗೆ ಸರ್ಕಾರದ ಅವೈಜ್ಞಾನಿಕ ಕ್ರಮಗಳಿಂದ ಆರೋಗ್ಯ ಕೇಂದ್ರ ಶಿವಮೊಗ್ಗಕ್ಕೆ ಸ್ಥಳಾಂತರವಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿದ್ದ ತಜ್ಞ ವೈದ್ಯರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಉತ್ತಮ ಸೇವೆಗಾಗಿ ಕಾಯಕಲ್ಪ ಯೋಜನೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರವು 2 ಬಾರಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.
ಬಡವರು, ಕೂಲಿ ಕಾರ್ಮಿಕರು, ರೈತರು, ಗರ್ಭಿಣಿ, ಬಾಣಂತಿಯರು, ವೃದ್ಧರಿಗೆ ಅನುಕೂಲವಾಗಿತ್ತು. ಇದೀಗ ಆರೋಗ್ಯ ಕೇಂದ್ರದಲ್ಲಿ ಸೂಕ್ತ ತಜ್ಞ ವೈದ್ಯರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಸಾರ್ವಜನಿಕರು 20ರಿಂದ 40 ಕಿ.ಮೀ. ದೂರದಿಂದ ಚಿಕಿತ್ಸೆಗಾಗಿ ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ಹೋಗುವಂತಾಗಿದೆ.
ಆಸ್ಪತ್ರೆ ಶಿವಮೊಗ್ಗಕ್ಕೆ ವರ್ಗಾಯಿಸಿರುವುದರಿಂದ ಅಲ್ಲಿನ ಸಿಬ್ಬಂದಿ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಆಯನೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು ಉಳಿಸಿ ತಜ್ಞ ವೈದ್ಯರ ನೇಮಕ ಮಾಡುವಂತೆ ವಿವಿಧ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.