ಹೊಸನಗರ ತಾಲೂಕಿನ ಮಳೆಮಾಪನ ದುರಸ್ತಿ ಮಾಡುವಂತೆ ಒತ್ತಾಯಿಸಿ ಸಹಕಾರ ಸಂಘಗಳ ಪ್ರಮುಖರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ವಿನಯಕುಮಾರ್, ಉಮೇಶ್, ಎಚ್.ಜಿ.ರಮಾಕಾಂತ, ಚಂದಯ್ಯ ಜೈನ್, ರವಿ, ವಿನಾಯಕ ಇತರರಿದ್ದರು.
ಹೊಸನಗರ: ಮಳೆಮಾಪನ ಕೇಂದ್ರಗಳಲ್ಲಿನ ವ್ಯತ್ಯಯದಿಂದ ಕಳೆದ ಎರಡು ವಷರ್ಗಳಿಂದ ರೈತರಿಗೆ ಬೆಳೆವಿಮೆ ಪರಿಹಾರದಲ್ಲಿ ಅನ್ಯಾಯವಾಗಿದೆ. ಈ ಬಾರಿಯಾದರೂ ಮಳೆಮಾಪನ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಕಳೂರು ಶ್ರೀ ರಾಮೇಶ್ವರ ಸಹಕಾರ ಸಂಘ, ತಾಲೂಕು ಕೃಷಿ ಮತ್ತು ಸಹಕಾರ ಸಂಘ, ವಿವಿಧ ಅಡಿಕೆ ಮಾರಾಟ ಸಂಘಗಳ ಪ್ರಮುಖರು ಮಂಗಳವಾರ ತಾಲೂಕು ಕಚೇರಿಯಲ್ಲಿ ಗ್ರೇಡ್-2 ತಹಸೀಲ್ದಾರ್ ರಾಕೇಶ್ ಬ್ರಿಟ್ಟೋ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಮಳೆಮಾಪನ ಯಂತ್ರಗಳು ಹಾಳಾಗಿದೆ. ಎರಡು ವಷರ್ಗಳಿಂದ ಈ ಭಾಗದ ರೈತರಿಗೆ ಬೆಳೆವಿಮೆ ಸರಿಯಾಗಿ ಸಿಗದೆ ಅನ್ಯಾಯವಾಗಿದೆ. ಈ ಬಾರಿ ನಿರೀಕ್ಷಿತ ಮಳೆಯಾಗದೆ ರೈತರು ಕಂಗೆಟ್ಟಿದ್ದಾರೆ. ಮತ್ತೊಂದೆಡೆ ಮಳೆ ಮಾಪನ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾದರೆ ರೈತರ ಗತಿ ಏನು? ಕೂಡಲೇ ತಾಲೂಕಿನ 30 ಗ್ರಾಪಂಗಳ ಮಳೆಮಾಪನ ಯಂತ್ರಗಳನ್ನು ಸರಿಪಡಿಸಿ ರೈತರಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಳೂರು ಸೊಸೈಟಿ ಅಧ್ಯಕ್ಷ ದುಮ್ಮ ವಿನಯಕುಮಾರ, ಎರಗಿ ಉಮೇಶ್, ಎಚ್.ಜಿ.ರಮಾಕಾಂತ, ಚಂದಯ್ಯ ಜೈನ್, ಗುಬ್ಬಿಗಾ ರವಿ, ವಿನಾಯಕ ಚಕ್ಕಾರು ಇತರರಿದ್ದರು.