ಸಾಗರ: ಮಠಮಂದಿರಗಳು ನಮ್ಮ ಸನಾತನ ಸಂಸ್ಕೃತಿ ಹಾಗೂ ಸಂಸ್ಕೃತವನ್ನು ಬೆಳೆಸುವ ನಿಟ್ಟಿನಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ಸಂಸ್ಕೃತ ಪ್ರಸಾರ ಮಾಡಲು ಶಿಬಿರಗಳನ್ನು ಆಯೋಜಿಸಿರುವ ಶಂಕರಮಠದ ಪರಿಕಲ್ಪನೆ ಅಭಿನಂದನಾರ್ಹ ಎಂದು ಸಾಮಾಜಿಕ ಕಾರ್ಯಕರ್ತ ಮಾ.ಸ.ನಂಜುಂಡಸ್ವಾಮಿ ಹೇಳಿದರು.
ಸಾಗರದ ಶೃಂಗೇರಿ ಶಂಕರಮಠದಲ್ಲಿ ಮಂಗಳವಾರ ಬಾಲಭಾರತಿ ಸಂಸ್ಕಾರ ಸುಧಾ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಶಿಬಿರದ ನಿರ್ದೇಶಕರಾದ ಶ್ರಾವ್ಯಾ ಸಾಗರ ದಂಪತಿಯನ್ನು ಅಭಿನಂದಿಸಿ ಮಾತನಾಡಿದರು.
ಇತ್ತೀಚೆಗೆ ಬೇಸಿಗೆ ಶಿಬಿರಗಳು ವ್ಯಾವಹಾರಿಕ ಕೇಂದ್ರಗಳಾಗುತ್ತಿವೆ. ಆದರೆ ಶಂಕರಮಠ ಉಚಿತವಾಗಿ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಿ ಶಿಬಿರ ನಡೆಸಿರುವುದು ಅನುಕರಣೀಯ ಎಂದರು.
ನಮ್ಮ ಸಂಸ್ಕೃತಿ ಉಳಿದಿರುವುದು ಮನೆಯಲ್ಲಿರುವ ಮಹಿಳೆಯರಿಂದ ಎನ್ನುವುದು ಗಮನಾರ್ಹ. ಮಹಿಳೆಯರು ಮೊಬೈಲ್, ಧಾರಾವಾಹಿಗಳಿಂದ ದೂರವಿದ್ದು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಮುನ್ನುಡಿ ಬರೆಯಬೇಕು. ದೇವರು, ಮಠಗಳ ಬಗ್ಗೆ ಮಕ್ಕಳಿಗೆ ಆಸಕ್ತಿ ಬೆಳೆಸಬೇಕು ಎಂದು ಹೇಳಿದರು.
ವಿದ್ವಾನ್ ಚಿರಂತನ ಬಡ್ತಿ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವುದನ್ನು ನಾವು ಮರೆಯಬಾರದು. ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕೆಲಸವಾಗಬೇಕು. ಹಿಂದೆ ಮನೆಯಲ್ಲಿ ಮಕ್ಕಳಿಗೆ ಸಹಜ ಸಂಸ್ಕಾರ ಸಿಗುತ್ತಿತ್ತು. ಇದೀಗ ಮಕ್ಕಳಿಗೆ ಸಂಸ್ಕಾರ ಕಲಿಯಲು ಶಿಬಿರಗಳಿಗೆ ಕಳಿಸುವ ಕಾಲ ಬಂದಿದೆ. ಮಕ್ಕಳು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದರು.