ಶಿಕಾರಿಪುರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಣಿತ-ವಿಜ್ಞಾನ ಮೇಳದಲ್ಲಿ ರಾಜಾರಾಮ್, ಡಾ. ಜಿ.ಎಸ್.ಶಿವಕುಮಾರ, ಎಚ್.ಎಂ.ರಾಘವೇಂದ್ರ, ನಾಗರಾಜ್ ಅಡಿಗ, ವಿಶ್ವನಾಥ, ಪ್ರಶಾಂತ ಕುಬಸದ ಇದ್ದರು.
ಶಿಕಾರಿಪುರ: ನಾವು ಇಡುವ ಪ್ರತಿ ಹೆಜ್ಜೆಯಲ್ಲೂ ಲೆಕ್ಕಾಚಾರ ಇರಬೇಕು. ಅದನ್ನು ಮೀರಿ ನಾವು ನಡೆಯಬಾರದು. ನಮ್ಮಲ್ಲಿ ಸಾತ್ವಿಕ ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳು ಹಾಸುಹೊಕ್ಕಾಗಿರಬೇಕು ಎಂದು ವಿದ್ಯಾಭಾರತಿ ಕರ್ನಾಟಕ ಪ್ರಾಂತ ಪ್ರಮುಖ್ ರಾಜಾರಾಮ್ ಹೇಳಿದರು.
ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ವಿದ್ಯಾಭಾರತಿ ಶಿವಮೊಗ್ಗ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಣಿತ- ವಿಜ್ಞಾನ ಮೇಳದಲ್ಲಿ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣದಲ್ಲಿ ಸಾಮಾಜಿಕ ಕಳಕಳಿ ಕ್ಷೀಣಿಸುತ್ತಿದೆ. ಕೇವಲ ಅಂಕಗಳಿಕೆ ಪ್ರಮುಖವಾಗಿದೆ. ರಾಷ್ಟ್ರೀಯ ಚಿಂತನೆಗಳು ದೂರವಾಗುತ್ತಿವೆ ಎಂದರು.
ದೇಶಭಕ್ತ, ದೇಶನಿಷ್ಠ, ಸಂಸ್ಕಾರಭರಿತ ಪ್ರಜೆಗಳನ್ನು ಅಣಿಗೊಳಿಸುವ ಉದ್ದೇಶದಿಂದ ವಿದ್ಯಾಭಾರತಿ ಪ್ರಾರಂಭವಾಗಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳ ಸವಾರ್ಂಗೀಣ ವಿಕಾಸಕ್ಕೆ ಶ್ರಮಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರ ಮತ್ತು ಪ್ರಯೋಗಶೀಲತೆ ಉತ್ತೇಜಿಸುವುದು, ಕರಕುಶಲತೆ ಹಾಗೂ ಸೃಜನಶೀಲ ಮಾದರಿಗಳನ್ನು ಪ್ರಸ್ತುತಪಡಿಸಲು ವೇದಿಕೆ ಕಲ್ಪಿಸುವುದು ಪ್ರಮುಖ ಉದ್ದೇಶ ಎಂದು ಹೇಳಿದರು.
ಶಿಕ್ಷಣವೇ ಎಲ್ಲ ರೀತಿಯ ಸಮಸ್ಯೆಗಳ ಪರಮೋಚ್ಚ ಪರಿಹಾರ. ಶಿಕ್ಷಣದಲ್ಲಿ ಜ್ಞಾನ ಸಂಪಾದನೆ ಅತಿ ಅವಶ್ಯಕ. ಮಕ್ಕಳು ಶಿಕ್ಷಣದೊಂದಿಗೆ ಉತ್ತಮ ಮಾನವೀಯ ಮೌಲ್ಯಗಳು ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ, ವಿದ್ಯಾಭಾರತಿ ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ಎಂ.ರಾಘವೇಂದ್ರ, ಪ್ರಾಂತೀಯ ಪ್ರಮುಖ ನಾಗರಾಜ್ ಅಡಿಗ, ಶಾಲಾ ಪ್ರಾಚಾರ್ಯ ವಿಶ್ವನಾಥ, ಪ್ರಭಾರಿ ಮುಖ್ಯ ಶಿಕ್ಷಕ ಪ್ರಶಾಂತ ಕುಬಸದ ಇತರರಿದ್ದರು.