ಸೊರಬ ತಾಲೂಕಿನ ಚೀಲೂರು ಗ್ರಾಮದ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮವನ್ನು ಶ್ರೀ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಮಲ್ಲಪ್ಪ, ತುಕರಾಮ, ಗಿರೀಶ್‌ಕುಮಾರ್, ಶಶಿಕುಮಾರ್, ರಾಜಪ್ಪ, ಧರ್ಮಪ್ಪ, ಲೋಕೇಶ್ ಇತರರಿದ್ದರು.
ಸೊರಬ: ಆರೋಗ್ಯಕರ ಗ್ರಾಮ ಮತ್ತು ಸಮಾಜ ನಿರ್ಮಾಣಕ್ಕೆ ದೇವತೆಗಳ ಅನುಗ್ರಹ ಕೂಡ ಅವಶ್ಯಕ. ಅದು ಧಾರ್ಮಿಕ ಕಾರ್ಯಗಳ ಆಚರಣೆಯಿಂದ ಸಾಧ್ಯ ಎಂದು ಜಡೆ ಸಂಸ್ಥಾನ ಮತ್ತು ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಮಂಗಳವಾರ ತಾಲೂಕಿನ ಚೀಲೂರು ಗ್ರಾಮದ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನ ಲೋಕಾರ್ಪಣೆ ಮತ್ತು ಮರು ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವರು ನಿಸರ್ಗದ ಜತೆಗೆ ಮನುಷ್ಯನನ್ನು ಸೃಷ್ಟಿ ಮಾಡುವ ಮೂಲಕ ಪರಸ್ಪರ ಅವಿನಾಭಾವ ಸಂಬಂಧ ಏರ್ಪಡಿಸಿದ್ದಾನೆ. 80 ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮ ದೊಡ್ಡದು ಮತ್ತು ಅರಿವಿನ ಜೀವವಾಗಿದೆ. ಎಲ್ಲರೂ ಅನುಸರಿಸುವ ಮಾರ್ಗ ಉತ್ತಮವಾಗಿರಬೇಕು. ಆದರೆ ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಯಲ್ಲಿ ಅಸಡ್ಡೆ ಹೊಂದಿರುವುದು ವಿಪರ್ಯಾಸ. ಇಂತಹ ಸಂದರ್ಭದಲ್ಲಿ ಚೀಲೂರಿನ ಗ್ರಾಮಸ್ಥರು ಧಾರ್ಮಿಕ ನಂಬಿಕೆಯಿಂದ ದೇವಾಲಯ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ಬಸವಾದಿ ಶರಣರು 12ನೇ ಶತಮಾನದಲ್ಲಿ ಎಲ್ಲರೂ ಒಟ್ಟಾಗಿ ಬದುಕಬೇಕು ಎಂಬುದನ್ನು ಸಾರಿದ್ದಾರೆ. ಒಳ್ಳೆಯ ಕಾರ್ಯ ಕೈಗೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಸತ್ಕಾರ್ಯ ಮಾಡುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ದೇಗುಲ ಲೋಕಾರ್ಪಣೆ ಅಂಗವಾಗಿ ಪಂಚಗವ್ಯ ಹವನ, ಸಪ್ತಶುದ್ಧಿ ಮತ್ತು ರಾಕ್ಷೋಘ್ನ ಹೋಮ, ಬಲಿ ಪೂಜೆ, ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆ, ಕಲಾವೃದ್ಧಿ ಹೋಮ ನಡೆಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಪ್ಪ, ಉಪಾಧ್ಯಕ್ಷ ತುಕರಾಮ, ಗಿರೀಶ್‌ಕುಮಾರ್, ಶಶಿಕುಮಾರ್, ರಾಜಪ್ಪ, ಧರ್ಮಪ್ಪ, ಲೋಕೇಶ್, ಕೆ.ಶಿವಪ್ಪ, ಮಂಜಪ್ಪ ಇತರರಿದ್ದರು.