ಆರಗ ಸಮೀಪದ ಎಂಐಒ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾದ ಮ್ಯಾಮೋಗ್ರಫಿ ವಿಭಾಗವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಕಿಮ್ಮನೆ ರತ್ನಾಕರ, ಆರ್.ಎಂ.ಮಂಜುನಾಥ ಗೌಡ, ಡಾ.ಸುರೇಶ್ ರಾವ್ ಇತರರಿದ್ದರು.
ತೀರ್ಥಹಳ್ಳಿ: ವಾಕ್ಸಿನ್, ತಪಾಸಣೆಯ ಭರವಸೆ ಇದ್ದರೂ ಕ್ಯಾನ್ಸರ್ ಮಹಾಮಾರಿಯಾಗಿ ಕಾಡುತ್ತಿದೆ. ಎಳೆಯ ಮಕ್ಕಳಿಂದ ಹಿಡಿದು ಆರ್ಥಿಕ ಸ್ಥಿತಿವಂತರನ್ನೂ ಉಳಿಸುವುದು ಸವಾಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಆರಗ ಗ್ರಾಮದ ಬಳಿಯ ಎಂಐಒ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮ್ಯಾಮೋಗ್ರಫಿ ಘಟಕ ಉದ್ಘಾಟಿಸಿ ಮಾತನಾಡಿದರು.
ಆರಂಭದ ದಿನಗಳಲ್ಲಿ ಉದಾಸೀನ ಧೋರಣೆಯಿಂದ 3 ಹಾಗೂ 4ನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ನನ್ನ ಆತ್ಮೀಯ ವಲಯದಲ್ಲಿಯೇ ಅನೇಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಆರ್ಥಿಕ ಪರಿಸ್ಥಿತಿ, ಭಯದ ಕಾರಣಕ್ಕೆ ತಪಾಸಣೆಗೆ ಒಳಗಾಗುತ್ತಿಲ್ಲ. ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಹೆಚ್ಚು ರೋಗದ ಬಗ್ಗೆ ಮಾಹಿತಿ ಹಂಚಿಕೆಯಾಗಬೇಕು. ಆಸ್ಪತ್ರೆ ಇನ್ನಷ್ಟು ಆಧುನಿಕ ಯಂತ್ರಗಳನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಹಸಿವು, ಆರೋಗ್ಯ, ಶಿಕ್ಷಣದ ಸೂಚ್ಯಾಂಕ ಸುಸ್ಥಿತಿಯಲ್ಲಿದ್ದರೆ ದೇಶ ಸುಭದ್ರವಾಗಿರುತ್ತದೆ. ಸರ್ಕಾರಗಳು ಈ ಬಗ್ಗೆ ಇನ್ನಷ್ಟು ಗಮಹರಿಸಬೇಕು ಎಂದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಆರೋಗ್ಯ ಕಾಪಾಡಲು ಸ್ವಚ್ಛತೆ ಬಹಳ ಮುಖ್ಯ. ಒತ್ತಡ ಹಾಗೂ ಕರೋನಾ ವ್ಯಾಕ್ಸಿನ್ ಹಲವು ಸಮಸ್ಯೆಗೆ ಕಾರಣ ಎಂಬ ಮಾತಿದೆ. ದೊಡ್ಡ ಕಾರ್ಪೋರೇಟ್ ಆಸ್ಪತ್ರೆಗೆ ಹೋಗುವುದು ಕಷ್ಟ. ಸಣ್ಣ ಆಸ್ಪತ್ರೆಗಳ ಸೇವೆ ಹೆಚ್ಚಿದರೆ ಜನರ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದರು.
ಎಂಐಒ ಆಸ್ಪತ್ರೆ ನಿರ್ದೇಶಕ ಡಾ.ಸುರೇಶ್ ರಾವ್, ಟ್ರಸ್ಟಿ ಡಾ. ರೋಹನ್ ಚಂದ್ರಕಟ್ಟಿ, ಪ್ರಮುಖರಾದ ಅನಿತಾ ನಾಗರಾಜ್, ರವಿರಾಜ್ ವೈದ್ಯ, ವಿಜೇಂದ್ರ ರಾವ್, ಟಿ.ಕೆ.ರಮೇಶ್ ಶೆಟ್ಟಿ, ಪ್ರತಿಮಾ ಎಸ್. ರಾವ್, ಡಾ.ಜ್ಯೋತಿ, ಡಾ.ಸುಹಾಸ್ ವಿ. ನಾವಡ ಇದ್ದರು.