ಮಳೆಗೆ ಕುಸಿದು ಬಿದ್ದ ಮನೆಗಳು

ಸಾಗರದಲ್ಲಿ ರಸ್ತೆ ಮೇಲೆ ನೀರು ನಿಂತು ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಸಾಗರದಲ್ಲಿ ರಸ್ತೆ ಮೇಲೆ ನೀರು ನಿಂತು ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
Published on
ಸಾಗರ: ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಅವಘಡಗಳು ಸಂಭವಿಸಿದ್ದು ಪಟ್ಟಣ ವ್ಯಾಪ್ತಿಯಲ್ಲಿ ಮುರ‌್ನಾಲ್ಕು ಮನೆಗಳು ಕುಸಿದಿವೆ.
ಶಿವಪ್ಪನಾಯಕ ನಗರದ ಆಟೋ ಚಾಲಕ ಮಂಜುನಾಥ್ ಎಂಬುವರ ಮನೆಗೆ ಸೋಮವಾರ ರಾತ್ರಿ ನೀರು ನುಗ್ಗಿ ಮನೆ ಸಂಪೂರ್ಣ ಕುಸಿದಿದೆ. ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಮನೆ ಬಿದ್ದ ಸ್ಥಳಕ್ಕೆ ಕಾಂಗ್ರೆಸ್ ಪ್ರಮುಖರು ಭೇಟಿ ನೀಡಿ ಕುಟುಂಬಸ್ಥರಿಗೆ ಆರ್ಥಿಕ ನೆರವು ನೀಡಿದರು. ವಿಪರೀತ ಮಳೆಯಿಂದಾಗಿ ಚನ್ನಮ್ಮ ವೃತ್ತ ಹಾಗೂ ಸಾಗರ ನಗರದಿಂದ ಸೂರನಗದ್ದೆ ಗ್ರಾಮಕ್ಕೆ ಹೋಗುವ ರಸ್ತೆಗಳು ಜಲಾವೃತವಾಗಿದ್ದು ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. 
ಕುಡಿಯುವ ನೀರಿಲ್ಲ:   ಒಂದು ಕಡೆ ಭಾರಿ ಮಳೆ ಸುರಿಯುತ್ತಿದೆ. ಇನ್ನೊಂದೆಡೆ ಸಾಗರದಲ್ಲಿ ನಾಲ್ಕು ದಿನಗಳಿಂದ ಜನರಿಗೆ ಕುಡಿಯುವ ನೀರು ಬರುತ್ತಿಲ್ಲ. ನಗರಕ್ಕೆ ಶರಾವತಿ ಹಿನ್ನೀರಿನಿಂದ ನೀರು ಪೂರೈಸುವ ಚೈನಾಗೇಟ್ ಪಕ್ಕದ ಅಂಬುಗಳಲೆ ಪಂಪ್ ಹೌಸ್‌ನಲ್ಲಿ ಉಂಟಾದ ವಿದ್ಯುತ್ ಸಮಸ್ಯೆಯಿಂದಾಗಿ ಮೋಟಾರ್ ಸುಟ್ಟು ಹೋಗಿದ್ದರಿಂದ ನೀರು ಸರಬರಾಜು ಆಗುತ್ತಿಲ್ಲ. ವಿದ್ಯುತ್ ಸಮಸ್ಯೆ ಹಾಗೂ ಪಂಪ್‌ಸೆಟ್ ರಿಪೇರಿ ಕಾರ್ಯ ಪ್ರಗತಿಯಲ್ಲಿದ್ದು, ನೀರು ಸರಬರಾಜು ಶೀಘ್ರ ಮಾಡಲಾಗುತ್ತದೆ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net