ತೀರ್ಥಹಳ್ಳಿ: ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ಸಮೀಪ ತುಂಗಾ ನದಿಯಲ್ಲಿರುವ ನಡುಗುಡ್ಡೆ ಜೋಗಿಕುತ್ರೆಗೆ ತೂಗು ಸೇತುವೆ ನಿರ್ಮಾಣಕ್ಕೆ ಎಂಎಡಿಬಿಯಿಂದ 3.30 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ತುಂಗಾ ನದಿ ಮಧ್ಯದಲ್ಲಿರುವ ಜೋಗಿಕುತ್ರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಋಷಿಮುನಿಗಳು ತಪಸ್ಸು ಮಾಡಿರುವ ತಾಣವೆಂಬ ಐತಿಹ್ಯವೂ ಇದೆ. ಈ ನಡುಗುಡ್ಡೆಯನ್ನು ಒಂದು ಪ್ರವಾಸಿ ತಾಣವಾಗಿ ಪರಿವರ್ತಿಸಲು ರಾಮೇಶ್ವರ ದೇವಸ್ಥಾನದಿಂದ ಈ ನಡುಗುಡ್ಡೆಗೆ ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಸಲುವಾಗಿ ತೂಗು ಸೇತುವೆ ನಿರ್ಮಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಂಎಡಿಬಿಯಿಂದ ಸರ್ಕಾರಕ್ಕೆ ಸಲ್ಲಿಸಬೇಕಾದ ಹಣದಲ್ಲಿ ಈ ಯೋಜನೆಗೆ ಅನುದಾನ ಮಂಜೂರು ಮಾಡುವಂತೆ ಸಲ್ಲಿಸಿರುವ ಪ್ರಸ್ತಾವನೆಗೆ ಸಿಎಂ ಡಿ.ಕೆ.ಶಿವಕುಮಾರ್ ಆದೇಶವೂ ದೊರೆತಿದೆ. ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದರು.
ಎಂಎಡಿಬಿಯಿಂದ ಪಟ್ಟಣದ ಸರ್ಕಾರಿ ಜೆಸಿ ಆಸ್ಪತ್ರೆಯ ರೋಗಿಗಳ ಸಹಾಯಕರ ವಿಶ್ರಾಂತಿ ಕೊಠಡಿ ನಿರ್ಮಾಣದ ಸಲುವಾಗಿ 40 ಲಕ್ಷ ರೂ., ಸಣ್ಣ ಸಂಕಗಳು, ಬಸ್ಟ್ಯಾಂಡ್, ರಸ್ತೆ ನಿರ್ಮಾಣಕ್ಕೆ ಒಟ್ಟು 8.51 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ಆಸಕ್ತಿ ಹೊಂದಿದ್ದಾರೆ. ರಾಜ್ಯದಲ್ಲಿ ಹಾಸನ ಹೊರತುಪಡಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ಪ್ರಖ್ಯಾತ, ಪೌರಾಣಿಕ ಮತ್ತು ಐತಿಹಾಸಿಕ ತಾಣಗಳಿವೆ. ಈ ಸಂಬಂಧ ಶೀಘ್ರದಲ್ಲಿ ಸಿಎಂ ತಾಲೂಕಿಗೂ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ಶಾಸಕರಾಗುವ ಅರ್ಹತೆಯೊಂದಿಗೆ ಆಸಕ್ತಿಯೂ ಇದೆ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದರು.