ಚುರ್ಚಿಗುಂಡಿ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕ ಬಿ.ವೈ. ವಿಜಯೇಂದ್ರ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆ.ಎಸ್.ಗುರುಮೂರ್ತಿ, ಮಹದೇವಪ್ಪ, ಬಿ.ಡಿ. ಭೂಕಾಂತ್, ಚನ್ನವೀರಪ್ಪ, ಪ್ರಾಚಾರ್ಯೆ ಸುಮಾ, ಪರಶುರಾಮ್ ಇತರರಿದ್ದರು
ಶಿಕಾರಿಪುರ: ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಪ್ರಾಕೃತಿಕ ಸಂಪತ್ತು ಉಳಿಸುವುದು ಅತ್ಯಗತ್ಯ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಸನ್ಯಾಸಿಕೊಪ್ಪ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ, ಉಚಿತ ಸಸಿ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಪರಿಸರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿ, ಸಹಕಾರಿ ಧುರೀಣ ಬಿ.ಡಿ.ಭೂಕಾಂತ್ ಅವರು ಪ್ರತಿವರ್ಷವೂ ಇಂತಹ ಪರಿಸರ ಜಾಗೃತಿ ಮತ್ತು ಸಮಾಜಮುಖಿ ಕಾರ್ಯಕ್ರಮ ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಸಂಘಟಕ ಬಿ.ಡಿ.ಭೂಕಾಂತ್ ಮಾತನಾಡಿ, ಈ ವರ್ಷವೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ, ಸಸಿ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಪರಿಸರ ಪ್ರಶಸ್ತಿ ವಿತರಣಾ ಸಮಾರಂಭ ಏರ್ಪಡಿಸಲಾಗಿದೆ ಎಂಂ ತಿಳಿಸಿದರು.
ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಚಿತವಾಗಿ ಸಸಿಗಳನ್ನು ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪರಿಸರ ಸಂರಕ್ಷಣೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ‘ಪರಿಸರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕೃಷಿಕ ಸಮಾಜದ ಅಧ್ಯಕ್ಷ ಮಹದೇವಪ್ಪ, ಮುಖಂಡರಾದ ಕೆ.ಎಸ್.ಗುರುಮೂರ್ತಿ, ಶಶಿಧರ ಚುರ್ಚಿಗುಂಡಿ, ರುದ್ರಮುನಿ, ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.